ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಇಂಧನ ಪೂರೈಕೆಯಲ್ಲಿ ಯಾವುದೇ ರೀತಿಯ ಅಭಾವ ಇಲ್ಲ ಎಂದು ಮತ್ತೊಮ್ಮೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಭರವಸೆ ನೀಡಿದೆ.
ಅಂತರ-ಸಚಿವಾಲಯ ಸಭೆಯಲ್ಲಿ ಈ ಕುರಿತು ಮಾತನಾಡಿದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ, ದೇಶದಲ್ಲಿ ತೈಲ ದಾಸ್ತಾನು ಸಾಕಷ್ಟಿದ್ದು, ಮುಂದಿನ ಎರಡು ತಿಂಗಳಿಗೆ ಆಗುವಷ್ಟು ಶೇಖರಣೆ ಇದ್ದು, ಯಾರು ಆತಂಕಕ್ಕೆ ಒಳಗಾಗಬೇಡಿ ಎಂದು ತಿಳಿಸಿದರು.
ನಾನು ಮತ್ತೊಮ್ಮೆ ನಿಮಗೆ ಭರವಸೆ ನೀಡುತ್ತಿದ್ದೇನೆ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಹೀಗಾಗಿ ಯಾರು ಕೂಡ ಆತಂಕದಲ್ಲಿ ಇರಬೇಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಎಲ್ ಪಿಜಿ ಹಾಗೂ ಸಿಎನ್ ಜಿ ಕುರಿತು ವಿವರಿಸಿದ ಅವರು, ದೇಶದಲ್ಲಿ ಶೇ. 100 ರಷ್ಟು ಪೂರೈಕೆಯಾಗುತ್ತಿದ್ದು, ಮಾರ್ಚ್‌ನಲ್ಲಿ 3,25000 ಸಂಪರ್ಕಗಳಿಗೆ ಅನಿಲ ಸರಬರಾಜು ಮಾಡಲಾಗಿದ್ದು, 2,85,000 ಹೊಸ ಸಂಪರ್ಕಗಳನ್ನು ನೀಡಲಾಗಿದೆ. ಜೊತೆಗೆ ಗ್ರಾಹಕರು 3, 50,000 ಹೊಸ ಸಂಪರ್ಕಗಳಿಗಾಗಿ ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.
ಇನ್ನು ಬೆಲೆ ಏರಿಕೆ ಆತಂಕವನ್ನು ದೂರ ಮಾಡಿದ ಅವರು, ಜಾಗತಿಕ ಮಟ್ಟದಲ್ಲಿ ಬೆಲೆ ಏರಿಕೆಯಾಗಿದ್ದು, ಎರಡು ತಿಂಗಳ ಹಿಂದೆ ನಾವು ಕಚ್ಚಾ ತೈಲವು ಬ್ಯಾರೆಲ್‌ಗೆ 70 ಡಾಲರ್ ನಲ್ಲಿ ವಹಿವಾಟು ನಡೆಸುದ್ದೇವು . ಆದರೆ ಈಗ ಬ್ಯಾರೆಲ್‌ಗೆ 100 ಡಾಲರ್ ದಾಟಿದೆ. ಆದರೆ ಭಾರತದಲ್ಲಿ ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಯಾವುದೇ ರೀತಿಯ ಏರಿಕೆಯಾಗಿಲ್ಲ ಎಂದು ತಿಳಿಸಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು 2022 ರಲ್ಲಿ ಏರಿಕೆಯಾಗಿತ್ತು. ಆ ಬಳಿಕ ಇಲ್ಲಿವರೆಗೆ ಯಾವುದೇ ರೀತಿಯಲ್ಲೂ ಹೆಚ್ಚಳವಾಗಿಲ್ಲ. ಆದರೆ 2024 ರಲ್ಲಿ 2 ರೂ.ಗಳಷ್ಟು ಕಡಿಮೆ ಮಾಡಲಾಗಿದೆ. ಈ ಮೂಲಕ ಸರಕಾರ ಜನತೆಗೆ ಯಾವ ಹೊರೆಯನ್ನು ಹಾಕುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.



