March 24, 2026
Tuesday, March 24, 2026
spot_img

ಬೆಳಗಾವಿಯಲ್ಲಿ ಗ್ಯಾಸ್ ಸಿಲಿಂಡರ್, ಇಂಧನ ಕೊರತೆ ಇಲ್ಲ: ವದಂತಿಗಳಿಗೆ ತೆರೆ ಎಳೆದ ಜಿಲ್ಲಾಧಿಕಾರಿ

ಹೊಸದಿಗಂತ ವರದಿ, ಬೆಳಗಾವಿ :

ಗೃಹಬಳಕೆ ಸಿಲಿಂಡರ್ ಹಾಗೂ ಇಂಧನದ ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಟ್ಟು ಆತಂಕಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಮನವಿ ಮಾಡಿಕೊಂಡರು.

ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ, ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಹಾಗೂ ನಗರದಲ್ಲಿ ಯಾವುದೇ ರೀತಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಇಲ್ಲ.ಬಂಕ್ ಗಳಲ್ಲಿ ಸ್ಟಾಕ್ ಖಾಲಿಯಾದರೆ ನಗರದಲ್ಲಿ ಕೇವಲ ಐದು ಗಂಟೆಗಳಲ್ಲಿ ಸ್ಟಾಕ್ ಲಭ್ಯವಾಗಲಿದೆ. ಇಂಧನ ಕೊರತೆ ವದಂತಿಗೆ ಕಿವಿಗೊಡಬಾರದು. ಇಂಧನ ಪೂರೈಕೆ ಕಂಪೆನಿ ಹಾಗೂ ಬಂಕ್ಮಾಲೀಕರ ಜತೆ ಈಗಾಗಲೇ ಚರ್ಚೆ ಮಾಡಲಾಗಿದ್ದು, ಇಂಧನ ಕೊರತೆ ಎಲ್ಲಿಯೂ ಕಂಡುಬಂದಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಜನರು ಆತಂಕಕ್ಕೆ ಒಳಗಾಗಿ ಇಂಧನ ಸಂಗ್ರಹಕ್ಕೆ ಮುಂದಾಗಿರುವುದರಿಂದ ಈ ರೀತಿಯ ಗೊಂದಲ ಉಂಟಾಗಿದೆ. ಬಂಕ್ ಗಳಲ್ಲಿ ಬಾಟಲ್ ಅಥವಾ ಕ್ಯಾನ್ ಗಳಲ್ಲಿ ಪೆಟ್ರೋಲ್ ಅಥವಾ ಡೀಸೆಲ್ ಮಾರಾಟ ಮಾಡುವುದಿಲ್ಲ.

ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಮಾಹಿತಿಯನ್ನು ಹರಡಿದರೆ ಅಂತಹವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬೆಳಗಾವಿ ನಗರ ಪೊಲೀಸ್ ಆಯುಕ್ತ ಭೂಷಣ ಗುಲಾಬ್ ರಾವ್ ಭೋರಸೆ ಅವರು, ಯಾವುದೇ ಪೆಟ್ರೋಲ್ ಬಂಕ್ ಗಳಲ್ಲಿ ಬಾಟಲ್ ಅಥವಾ ಕ್ಯಾನ್ ಗಳಲ್ಲಿ ಇಂಧನ ಮಾರಾಟಕ್ಕೆ ಅವಕಾಶ ನೀಡುವುದಿಲ್ಲ; ಅಕ್ರಮವಾಗಿ ಇಂಧನ ಸಂಗ್ರಹ ಮತ್ತು ಮಾರಾಟ ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೇ ಶಾಂತ ರೀತಿಯಿಂದ ಸಹಕರಿಸಬೇಕು. ಏನೇ ಅಕ್ರಮ ಅಥವಾ ಗಲಾಟೆ ಕಂಡುಬಂದರೆ 112 ಸಂಖ್ಯೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು.

ಈ ವೇಳೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಅಜಯ್ ಪೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !