ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರದ ಪವರ್ ಶೇರಿಂಗ್ ಗೊಂದಲದಿಂದಾಗಿ ಇಡೀ ರಾಜ್ಯದಲ್ಲಿ ಅಸ್ಥಿರತೆ, ಅರಾಜಕತೆ ನಿರ್ಮಾಣವಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಚಿಕ್ಕಮಗಳೂರು ಜಿಲ್ಲೆ ಬಾಳೆಹೊನ್ನೂರು ರಂಭಾಪುರಿ ಪೀಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಎಂದರೆ ಕಾಂಗ್ರೆಸ್ ಎನ್ನುವ ಸ್ಥಿತಿಯಿದೆ. ರಾಜ್ಯದಲ್ಲಿ ಅರಾಜಕತೆ, ಅಸ್ಥಿರತೆಯಿಂದ ಆಡಳಿತ ಯಂತ್ರದ ನಿಯಂತ್ರಣ ಕಳೆದುಕೊಂಡ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ರಾಜ್ಯದ ನಾಯಕರ ಮೇಲೆ ಕಾಂಗ್ರೆಸ್ ಹೈಕಮಾಂಡ್‌ಗೆ ನಿಯಂತ್ರಣ ಉಳಿದಿಲ್ಲ. ಕಾಂಗ್ರೆಸ್‌ನಲ್ಲಿ ಹೈ ಮಾತ್ರವಿದ್ದು, ಕಮಾಂಡ್ ಇಲ್ಲದಂತಾಗಿದೆ. ರಾಜ್ಯದವರೇ ರಾಷ್ಟ್ರೀಯ ಅಧ್ಯಕ್ಷರಾಗಿದ್ದರೂ, ಹೈಕಮಾಂಡ್‌ಗೆ ಕೇಳಿ ಇಲ್ಲಿನ ಪರಿಸ್ಥಿತಿಯನ್ನು ಸರಿ ಮಾಡುವುದಾಗಿ ಹೇಳುವ ಸ್ಥಿತಿ ಬಂದಿದೆ. ಗೊಂದಲಮಯ ವಾತಾವರಣದಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ದೂರಿದರು.
ಜನರು ಐದು ವರ್ಷ ಆಡಳಿತ ಮಾಡಬೇಕು ಎಂದು ಕಾಂಗ್ರೆಸ್‌ನವರಿಗೆ ಅಧಿಕಾರ ಕೊಟ್ಟಿದ್ದಾರೆ. ನಮಗೆ ವಿರೋಧ ಪಕ್ಷದಲ್ಲಿರಲು ಜನಾದೇಶ ಬಂದಿದೆ. ನಾವು ಅದನ್ನು ಯಶಸ್ವಿಯಾಗಿ ನಡೆಸುತ್ತಿದ್ದೇವೆ. ರಾಜ್ಯ ಸರ್ಕಾರ ತನ್ನ ಕೆಲಸವನ್ನು ಸರಿಯಾಗಿ ಮಾಡಬೇಕು. ಇಲ್ಲದಿದ್ದರೆ ಜನ ಸೂಕ್ತ ಪಾಠ ಕಲಿಸಲಿದ್ದಾರೆ ಎಂದರು.

