ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ನೀಡಿರುವ ಗ್ಯಾರಂಟಿ ಯೋಜನೆಗಳ ಜೊತೆಗೆ, ಬೆಂಗಳೂರು ನಗರದಲ್ಲಿ ಜನರಿಗೆ “ಗುಂಡಿ ಭಾಗ್ಯ”ವೂ ಲಭಿಸಿದೆ! ರಸ್ತೆಯ ಗುಂಡಿಗಳಿಂದ ನಗರದ ಜನತೆ ಸಂಪೂರ್ಣವಾಗಿ ರೋಸಿ ಹೋಗಿದ್ದು, ಈ ದುಸ್ಥಿತಿಗೆ ಸರ್ಕಾರವನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಬೆಂಗಳೂರನ್ನು ಗುಂಡಿ ಮುಕ್ತಗೊಳಿಸಲು ಅಧಿಕಾರಿಗಳಿಗೆ ನೀಡಲಾಗಿದ್ದ ಡೆಡ್‌ಲೈನ್ ನಿನ್ನೆಗೆ ಕೊನೆಗೊಂಡಿದ್ದರೂ, ಗುಂಡಿಗಳನ್ನು ಮುಚ್ಚುವ ಕೆಲಸ ಪೂರ್ಣಗೊಂಡಿಲ್ಲ. ಹೀಗಾಗಿ, ಈ ಗಡುವನ್ನು ಮತ್ತೊಮ್ಮೆ ನವೆಂಬರ್ 10ರವರೆಗೆ ವಿಸ್ತರಣೆ ಮಾಡಲಾಗಿದೆ.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೇ ನೀಡಿದ ಆದೇಶಕ್ಕೆ ಸೊಪ್ಪು ಹಾಕದ ಅಧಿಕಾರಿಗಳು, ಈಗ ಕೇವಲ ಜಿಬಿಎ ಆಯುಕ್ತರ ಹೊಸ ಗಡುವಿಗೆ ಬದ್ಧರಾಗಿ ಕೆಲಸ ಮಾಡುತ್ತಾರೆಯೇ ಎಂಬುದು ಸಾರ್ವಜನಿಕ ವಲಯದಲ್ಲಿ ಎದ್ದಿರುವ ದೊಡ್ಡ ಪ್ರಶ್ನೆಯಾಗಿದೆ.
16 ಸಾವಿರಕ್ಕೂ ಹೆಚ್ಚು ಗುಂಡಿಗಳು: ಕಮಿಷನರ್ ಮಳೆ ನೆಪ!
ನಗರದ ಮುಖ್ಯ ರಸ್ತೆಗಳು, ಉಪ ರಸ್ತೆಗಳು ಮತ್ತು ವಾರ್ಡ್‌ಗಳ ರಸ್ತೆಗಳಲ್ಲಿ 16 ಸಾವಿರಕ್ಕೂ ಹೆಚ್ಚು ಗುಂಡಿಗಳು ಬಿದ್ದಿವೆ. ಈ ಅಪಾಯಕಾರಿ ಗುಂಡಿಗಳಿಗೆ ಇನ್ನೂ ಟಾರು ಭಾಗ್ಯ ಸಿಕ್ಕಿಲ್ಲ. ಕಳೆದ ತಿಂಗಳು ಸುರಿದ ಭಾರೀ ಮಳೆಯ ಕಾರಣದಿಂದ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗಿಲ್ಲ ಎಂದು ಜಿಬಿಎ ಕಮಿಷನರ್ ಮಹೇಶ್ವರ್ ರಾವ್ ಸಮಜಾಯಿಷಿ ನೀಡುತ್ತಿದ್ದಾರೆ.
ಗುಂಡಿಗಳನ್ನು ತುರ್ತಾಗಿ ಮುಚ್ಚಲು ಸಿಎಂ ಮತ್ತು ಡಿಸಿಎಂ ಹಲವು ಬಾರಿ ಡೆಡ್‌ಲೈನ್‌ಗಳನ್ನು ನೀಡಿದ್ದರೂ ಸಹ, ನಗರವನ್ನು ಗುಂಡಿಮುಕ್ತ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಕೇವಲ ಎರಡು ದಿನಗಳ ಹಿಂದೆ, ಜಿಬಿಎ ಮುಖ್ಯ ಆಯುಕ್ತರು ಅಧಿಕಾರಿಗಳ ಸಭೆ ನಡೆಸಿ, ಒಂದು ವಾರದೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದರೆ, ಅಧಿಕಾರಿಗಳು ಮತ್ತು ಸಿಬ್ಬಂದಿ ಈ ಹೊಸ ಗಡುವಿನೊಳಗೆ ಎಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಾರೆ ಮತ್ತು ಗುಂಡಿಗಳನ್ನು ಮುಚ್ಚಿ ತಲುಪುತ್ತಾರೆ ಎಂಬುದೇ ಸದ್ಯದ ಕುತೂಹಲದ ವಿಷಯವಾಗಿದೆ.

