ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಇತ್ತೀಚಿನ ಹೇಳಿಕೆಯಲ್ಲಿ “ನವೆಂಬರ್ ಕ್ರಾಂತಿ” ಕುರಿತು ರಾಜಕೀಯ ನಾಯಕರ ಭವಿಷ್ಯವನ್ನು ಹಾಸ್ಯಾಸ್ಪದವಾಗಿ ಉಲ್ಲೇಖಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರದೀಪ್ ಈಶ್ವರ್ “ನವೆಂಬರ್ ಕ್ರಾಂತಿ ಅಂದ್ರೆ ಅಶೋಕಣ್ಣನ ಚೇರ್‌ಗೆ ಸುನಿಲ್ ಅಣ್ಣ ಬರುತ್ತಿದ್ದಾರೆ. ಖಂಡಿತವಾಗಿ ನವೆಂಬರ್ ಕ್ರಾಂತಿ ಆಗುತ್ತೆ. ಸುನಿಲ್ ಅವರು ಅಶೋಕಣ್ಣನ ಚೇರ್ ಕಿತ್ತುಕೊಂಡು ಹೊರಟು ಹೋಗುತ್ತಾರೆ” ಎಂದು ಹೇಳಿದ್ದಾರೆ. ಜೊತೆಗೆ, “ಅಶೋಕಣ್ಣ ಪದ್ಮನಾಭನಗರದಲ್ಲಿ ಜೋತಿಷ್ಯಾಲಯ ಚಾಪೆ ಮೇಲೆ ಕುಳಿತುಕೊಂಡಿರುತ್ತಾರೆ. ಇದೇ ನವೆಂಬರ್ ಕ್ರಾಂತಿ” ಎಂದು ವ್ಯಂಗ್ಯವಾಡಿದರು.
“ಅಶೋಕಣ್ಣ ಪದೇಪದೇ ಅಕ್ಟೋಬರ್, ನವೆಂಬರ್ ಕ್ರಾಂತಿ ಅನ್ನೋ ಮಾತು ಆಡ್ತಿದ್ದಾರೆ. ಅದರಿಂದ ನೋಡಿದ್ರೆ ನವೆಂಬರ್ ಕ್ರಾಂತಿಯಲ್ಲಿ ಅವರದ್ದೇ ಷಡ್ಯಂತ್ರವಿದೇ ಅನ್ನಿಸುತ್ತಿದೆ” ಎಂದು ಹೇಳಿದರು.
ಕಾಂಗ್ರೆಸ್‌ನಲ್ಲಿ ನವೆಂಬರ್ ಕ್ರಾಂತಿ ಕುರಿತು ಮಾತನಾಡಿದ ಅವರು, “ನವೆಂಬರ್ 15ರಿಂದ 30ರವರೆಗೆ ಬದಲಾವಣೆ ಇರಬಹುದು ಅಂತ ಪಕ್ಷದವರ ಮಾತು ಕೇಳಿ ಬಂದಿದೆ. ಆದರೆ ಸಿಎಂ ಅಥವಾ ಡಿಸಿಎಂ ಯಾರಾಗಬೇಕು ಅನ್ನೋದರ ಬಗ್ಗೆ ನಾನು ಮಾತನಾಡುವಷ್ಟು ದೊಡ್ಡವನು ಅಲ್ಲ. ನಾನು ಎಂಎಲ್ಎ ಮಾತ್ರ. ಎಲ್ಲ ಸಮುದಾಯದವರೂ ಸಿಎಂ ಆಗಬೇಕು ಅನ್ನೋದು ನನ್ನ ಆಸೆ” ಎಂದರು.
ಪ್ರದೀಪ್ ಈಶ್ವರ್ ತಮ್ಮನ್ನು “ವಿಷ್ಣುವಿನ ಅವತಾರದಲ್ಲಿ” ಬಿಜೆಪಿ ನಾಯಕರು ಹೋಲಿಕೆ ಮಾಡಿದ ಬಗ್ಗೆ ಪ್ರತಿಕ್ರಿಯಿಸುತ್ತಾ, “ವಿಷ್ಣು ಹಂದಿ ರೂಪ ತಾಳಿ ಸಂಹಾರ ಮಾಡಿದ್ರು. ಹೀಗಾಗಿ ನನ್ನನ್ನು ವಿಷ್ಣುವಿನ ರೂಪದಲ್ಲಿ ನೋಡಿದರೆ ರಾಜಭವನಕ್ಕೆ ಹೋಗೋದ್ರಲ್ಲಿ ತಪ್ಪಿಲ್ಲ. ಸಿಎಂ ಹಾಗೂ ಡಿಸಿಎಂ ಸಾಹೇಬ್ರ ಪ್ರೀತಿಯ ಪುತ್ರನಾದ ನಾನು ಪ್ರಮಾಣವಚನ ಸ್ವೀಕರಿಸದೇ ಇದ್ದರೂ, ನಮ್ಮ ಸ್ನೇಹಿತರು ಪ್ರಮಾಣವಚನ ಸ್ವೀಕರಿಸುವುದನ್ನು ನೋಡಲು ರಾಜಭವನಕ್ಕೆ ಹೋಗುತ್ತೇನೆ” ಎಂದು ಹೇಳಿದ್ದಾರೆ.

                                    