2024 ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲೂ ನಡೆದಿದೆ ಕಳ್ಳಾಟ: ರಾಹುಲ್ ಗಾಂಧಿ ಹೊಸ ಬಾಂಬ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

2024 ಲೋಕಸಭೆ ಚುನಾವಣೆಯಲ್ಲಿ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ಕಳ್ಳಾಟ ನಡೆದಿದೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(SIR)ಮತ್ತು ಆಪರೇಷನ್ ಸಿಂದೂರ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆಗೆ ಒತ್ತಾಯಿಸಿ ಪ್ರತಿಪಕ್ಷಗಳು ಕಲಾಪಕ್ಕೆ ಅಡ್ಡಿಪಡಿಸುತ್ತಲೇ ಇದ್ದುದರಿಂದ ಸಂಸತ್ತಿನ ಉಭಯ ಸದನಗಳ ಕಲಾಪವನ್ನು ಸತತ ಮೂರನೇ ದಿನವೂ ಮುಂದೂಡಲಾಯಿತು.

ನಂತರ ಸಂಸತ್ ಭವನದ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ‘ಮತಗಳ ಕಳ್ಳತನ’ ಹೇಗೆ ನಡೆಯುತ್ತಿದೆ ಎಂಬುದನ್ನು ಜನರ ಮುಂದೆ ಮತ್ತು ಚುನಾವಣಾ ಆಯೋಗದ ಮುಂದೆ ಶೀಘ್ರದಲ್ಲೇ ಬ್ಲ್ಯಾಕ್ ಎಂಡ್ ವೈಟ್ ಆಗಿ ಸತ್ಯವನ್ನು ತೆರೆದಿಡುತ್ತೇನೆ ಎಂದರು.

ಬಿಹಾರದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ SIR ನಲ್ಲಿ ಮನೆ-ಮನೆಗೆ ಭೇಟಿ ನೀಡಿದಾಗ, ಚುನಾವಣಾ ಅಧಿಕಾರಿಗಳು ಇಲ್ಲಿಯವರೆಗೆ 52 ಲಕ್ಷಕ್ಕೂ ಹೆಚ್ಚು ಮತದಾರರು ತಮ್ಮ ವಿಳಾಸಗಳಲ್ಲಿ ಇಲ್ಲ ಮತ್ತು ಇನ್ನೂ 18 ಲಕ್ಷ ಜನ ಸಾವನ್ನಪ್ಪಿದ್ದಾರೆ ಎಂದು EC ಇತ್ತೀಚೆಗೆ ಬಹಿರಂಗಪಡಿಸಿರುವುದನ್ನು ರಾಹುಲ್ ಗಾಂಧಿ ಹೇಳಿದರು.

ಇದು ಕೇವಲ 52 ಲಕ್ಷ ಜನರ ವಿಷಯವಲ್ಲ. ಬಿಹಾರದ ಬಗ್ಗೆ ಮಾತ್ರವಲ್ಲ, ಅವರು ಮಹಾರಾಷ್ಟ್ರದಲ್ಲಿ ಮೋಸ ಮಾಡಿದ್ದಾರೆ. ನಾವು ಚುನಾವಣಾ ಆಯೋಗಕ್ಕೆ ಪ್ರಶ್ನೆಗಳನ್ನು ಕೇಳಿದ್ದೇವೆ, ಮತದಾರರ ಪಟ್ಟಿಯನ್ನು ತೋರಿಸಲು ಹೇಳಿದ್ದೇವೆ; ಅವರು ನಮಗೆ ಮತದಾರರ ಪಟ್ಟಿಯನ್ನು ತೋರಿಸಿಲ್ಲ. ನಾವು ವಿಡಿಯೋಗ್ರಫಿ ಕೇಳಿದ್ದೇವೆ. ಅವರು ಅದನ್ನು ನೀಡಿಲ್ಲ. ಆದರೆ ಕಾನೂನನ್ನು ಬದಲಾಯಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಒಂದು ಕೋಟಿ ಹೊಸ ಮತದಾರರು ಬಂದಿದ್ದರು, ಮತ್ತು ಚುನಾವಣೆಯನ್ನು ಕದ್ದಿದ್ದಾರೆ ಎಂದು ಆರೋಪಿಸಿದರು.

ಅದೇ ರೀತಿ ಕರ್ನಾಟಕದಲ್ಲೂ ‘ಭಯಂಕರ್ ಚೋರಿ(ಬೃಹತ್ ಕಳ್ಳತನ)’ ಆಗಿರುವುದನ್ನು ನಾವು ಪತ್ತೆ ಹಚ್ಚಿದ್ದೇವೆ. ನಾನು ಅದನ್ನು ನಿಮಗೆ ಮತ್ತು ಚುನಾವಣಾ ಆಯೋಗಕ್ಕೆ ಕಪ್ಪು ಮತ್ತು ಬಿಳಿ ಬಣ್ಣದಲ್ಲಿ ತೋರಿಸುತ್ತೇನೆ. ‘ಚೋರಿ’ಯನ್ನು ಹೇಗೆ ಮಾಡಲಾಗುತ್ತದೆ ಮತ್ತು ಎಲ್ಲಿಂದ ಮಾಡಲಾಗುತ್ತದೆ ಎಂಬುದನ್ನು ನಾನು ಬ್ಲ್ಯಾಕ್ ಎಂಡ್ ವೈಟ್ ನಲ್ಲಿ ತೋರಿಸುತ್ತೇನೆ ಎಂದು ಹೇಳಿದರು.

ಕರ್ನಾಟಕದ ಒಂದು ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು, ಅಲ್ಲಿನ ಚುನಾವಣಾ ಪ್ರಕ್ರಿಯೆ ಬಗ್ಗೆ ಆಳವಾದ ಅಧ್ಯಯನ ನಡೆಸಿದ್ದೆವು. ಬೋಗಸ್ ವೋಟಿಂಗ್ ಬಗ್ಗೆ ಇಂಚಿಂಚು ಮಾಹಿತಿ ನಮಗೆ ಲಭ್ಯವಾಗಿದೆ. ಎಲ್ಲಾ ವಿಚಾರಗಳನ್ನು ಸದ್ಯದಲ್ಲೇ ಜನರ ಮುಂದೆ ಇಡಲಿದ್ದೇವೆ. ಎಲ್ಲಾ ಕಳ್ಳಾಟ ಸದ್ಯದಲ್ಲೇ ಹೊರಬರಲಿದೆ ಎಂದು ರಾಹುಲ್ ಗಾಂಧಿ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!