ಭಾರತ ಸರ್ಕಾರದ ಸ್ವಚ್ಛ ಭಾರತ ಮಿಷನ್ ಆರಂಭವಾದ ನಂತರ ದೇಶದಾದ್ಯಂತ ಸ್ವಚ್ಛತೆಗೆ ಹೊಸ ಜಾಗೃತಿ ಮೂಡಿದೆ. ಗಾಂಧೀಜಿಯವರ “ಸ್ವಚ್ಛ ಭಾರತ” ಕನಸನ್ನು ಸಾಕಾರಗೊಳಿಸಲು ಪ್ರತಿ ರಾಜ್ಯ, ನಗರ, ಹಳ್ಳಿ, ಪಟ್ಟಣ ಎಲ್ಲೆಡೆ ಸ್ವಚ್ಛತಾ ಅಭಿಯಾನಗಳು ನಡೆಯುತ್ತಿವೆ. ಆದರೆ ಈ ಎಲ್ಲ ಪ್ರಯತ್ನಗಳ ನಡುವೆಯೂ ಅನೇಕ ನಗರಗಳು ಇನ್ನೂ ಕಸದ ರಾಶಿಯಲ್ಲಿ ಮುಳುಗಿವೆ. ಸಮರ್ಪಕ ಒಳಚರಂಡಿ ವ್ಯವಸ್ಥೆಯ ಕೊರತೆ, ತ್ಯಾಜ್ಯ ವಿಲೇವಾರಿ ಕ್ರಮದ ಅಭಾವ ಮತ್ತು ಸಾರ್ವಜನಿಕರ ನಿರ್ಲಕ್ಷ್ಯ ಇವುಗಳೆಲ್ಲಾ ಸೇರಿ ನಗರಗಳ ನೈರ್ಮಲ್ಯವನ್ನು ಹಾಳು ಮಾಡಿವೆ.
ಇತ್ತೀಚೆಗಷ್ಟೇ ಪ್ರಕಟವಾದ “ಸ್ವಚ್ಛ ಸರ್ವೇಕ್ಷಣ್ 2025” ವರದಿ, ಈ ಚಿತ್ರಣವನ್ನು ಮತ್ತೊಮ್ಮೆ ದೃಢಪಡಿಸಿದೆ. ಈ ವರದಿ ಪ್ರಕಾರ ಸಣ್ಣ ಪಟ್ಟಣಗಳು ಸ್ವಚ್ಛತೆಯಲ್ಲಿ ದೊಡ್ಡ ಮಹಾನಗರಗಳನ್ನು ಮೀರಿಸಿವೆ. ಆದರೆ ಆಶ್ಚರ್ಯಕರವಾಗಿ, ಸ್ಮಾರ್ಟ್ ಸಿಟಿ ಎಂದು ಕರೆಯಲ್ಪಡುವ ಹೈಟೆಕ್ ನಗರಗಳೇ “ಅತ್ಯಂತ ಕೊಳಕು ನಗರಗಳ” ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
ಭಾರತದ ಟಾಪ್ 10 ಕೊಳಕು ನಗರಗಳು ಹೀಗಿವೆ
- ಮಧುರೈ (ತಮಿಳುನಾಡು)
- ಲುಧಿಯಾನ (ಪಂಜಾಬ್)
- ಚೆನ್ನೈ (ತಮಿಳುನಾಡು)
- ರಾಂಚಿ (ಜಾರ್ಖಂಡ್)
- ಬೆಂಗಳೂರು (ಕರ್ನಾಟಕ)
- ಧನ್ಬಾದ್ (ಜಾರ್ಖಂಡ್)
- ಫರಿದಾಬಾದ್ (ಹರ್ಯಾಣ)
- ಗ್ರೇಟರ್ ಮುಂಬೈ (ಮಹಾರಾಷ್ಟ್ರ)
- ಶ್ರೀನಗರ (ಜಮ್ಮು ಕಾಶ್ಮೀರ)
- ದೆಹಲಿ (ರಾಜಧಾನಿ)
ಕೆಲ ನಗರಗಳು ತಮ್ಮ ನೈರ್ಮಲ್ಯ ಪ್ರಯತ್ನಗಳಿಂದ ಪ್ರಶಂಸೆಗೆ ಪಾತ್ರವಾಗಿವೆ.
- ಅಹಮದಾಬಾದ್ (ಗುಜರಾತ್) — ತ್ಯಾಜ್ಯ ವಿಂಗಡಣೆ ಮತ್ತು ಮರುಬಳಕೆಯಲ್ಲಿ ಮಾದರಿ.
- ಭೋಪಾಲ್ (ಮಧ್ಯಪ್ರದೇಶ) — ಸ್ವಚ್ಛತೆಯ ಮಾದರಿ ನಿರ್ವಹಣೆ.
- ಲಕ್ನೋ (ಉತ್ತರ ಪ್ರದೇಶ) — 7-ಸ್ಟಾರ್ ಕಸ ಮುಕ್ತ ನಗರ ಪ್ರಮಾಣೀಕರಣ ಪಡೆದಿದೆ.
- ರಾಯ್‌ಪುರ (ಛತ್ತೀಸ್‌ಗಢ) — ನಾಗರಿಕರ ಸಕ್ರಿಯ ಭಾಗವಹಿಸುವಿಕೆ, ಶ್ಲಾಘನೀಯ ಪ್ರಯತ್ನ.
- ಜಬಲ್ಪುರ (ಮಧ್ಯಪ್ರದೇಶ) — ನಿರಂತರ ಸುಧಾರಣೆಯೊಂದಿಗೆ ನೈರ್ಮಲ್ಯದಲ್ಲಿ ಮುಂಚೂಣಿ.
ಇದಲ್ಲದೆ, ಇಂದೋರ್, ಸೂರತ್ ಮತ್ತು ನವಿ ಮುಂಬೈ ನಗರಗಳು “ಸೂಪರ್ ಸ್ವಚ್ಛ ಲೀಗ್” ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

