ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆಚ್ಚುವರಿ ವರದಕ್ಷಿಣೆಗಾಗಿ ನಿಕ್ಕಿ ಎಂಬ ಮಹಿಳೆಯನ್ನು ಆಕೆಯ ಪತಿ, ಅತ್ತೆ-ಮಾವ ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಗ್ರೇಟರ್ ನೋಯ್ಡಾದಲ್ಲಿ ನಡೆದಿದೆ.
ಗಂಭೀರವಾಗಿ ಸುಟ್ಟ ಗಾಯಗಳ ಸ್ಥಿತಿಯಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿಂದ ಬೇರೊಂದು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.
ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಮಹಿಳೆಯ ಪತಿ ವಿಪಿನ್ ಅನ್ನು ಬಂಧಿಸಲಾಗಿದೆ. ಇತರರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
‘ನನ್ನ ಅಮ್ಮನ ಮೇಲೆ ಏನೋ ಸುರಿದರು, ನಂತರ ಅವಳಿಗೆ ಹೊಡೆದರು. ಆಮೇಲೆ ಲೈಟರ್ನಿಂದ ಅವಳಿಗೆ ಬೆಂಕಿ ಹಚ್ಚಿದರು’ಎಂದು ಮಹಿಳೆಯ ಆರು ವರ್ಷದ ಮಗ ಹೇಳಿದ್ದಾನೆ. ಗುರುವಾರ ರಾತ್ರಿ ಮಹಿಳೆಯ ಮೇಲೆ ಪತಿ ಹಾಗೂ ಅತ್ತೆ ಬೆಂಕಿ ಹಚ್ಚಿದ್ದು, ಇದನ್ನು ಕಣ್ಣಾರೆ ಕಂಡ ಬಾಲಕ ಘಟನೆಯ ಬಗ್ಗೆ ಈ ರೀತಿಯ ಹೇಳಿಕೆ ನೀಡಿದ್ದಾನೆ.
ಭಯಾನಕ ಘಟನೆಯ ಎರಡು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಒಬ್ಬ ಪುರುಷ ಹಾಗೂ ಒಬ್ಬ ಮಹಿಳೆ, ಸಂತ್ರಸ್ತ ಮಹಿಳೆಯ ಕೂದಲನ್ನು ಎಳೆದು ಹಲ್ಲೆ ಮಾಡಿದ್ದಾರೆ. ಅದೇ ಕುಟುಂಬಕ್ಕೆ ಮದುವೆಯಾಗಿದ್ದ ನಿಕ್ಕಿಯ ಅಕ್ಕ ಕಾಂಚನ, ಘಟನೆಯ ವಿಡಿಯೋವನ್ನು ಸೆರೆಹಿಡಿದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಕಾಂಚನಾ ಅವರು, ನನ್ನ ತಂಗಿಯನ್ನು ಅವಳ ಪತಿ ಹಾಗೂ ಅತ್ತೆ, ಮಾವ 36 ಲಕ್ಷ ರೂ. ವರದಕ್ಷಿಣೆಯನ್ನು ನೀಡದ್ದಕ್ಕೆ ಕೊಲೆ ಮಾಡಿದರು ಎಂದು ಆರೋಪಿಸಿದ್ದಾರೆ.
ಗುರುವಾರ ರಾತ್ರಿ ಆಕೆಗೆ ಹೊಡೆದು, ಹಲ್ಲೆ ನಡೆಸಿ, ಬೆಂಕಿ ಹಚ್ಚಲಾಯಿತು. ವರದಕ್ಷಿಣೆಗಾಗಿ ಕಳೆದ ಹಲವು ದಿನಗಳಿಂದ ನಮ್ಮನ್ನು ಹೊಡೆದು ಹಿಂಸಿಸುತ್ತಿದ್ದರು. 36 ಲಕ್ಷ ವರದಕ್ಷಿಣೆ ನೀಡುವಂತೆ ಪೀಡಿಸುತ್ತಿದ್ದರು. ವರದಕ್ಷಿಣೆಗಾಗಿ ನನ್ನ ಸಹೋದರಿಗೆ ಅವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ ಎಂದು ದೂರಿದರು.