April 10, 2026
Friday, April 10, 2026
spot_img

ಹೇಳಿದ್ದು ಒಂದು, ಮಾಡಿದ್ದು ಇನ್ನೊಂದು…ಸಲೂನ್ ಸಿಬ್ಬಂದಿಯ ಎಡವಟ್ಟಿಗೆ ಬಿತ್ತು 25 ಲಕ್ಷ ರೂ. ದಂಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೇರ್ ಸಲೂನ್‌ ಸಮಯ ಉಂಟಾದ ಒಂದು ಸಣ್ಣ ತಪ್ಪು ಇಂದು ದೇಶಾದ್ಯಂತ ಚರ್ಚೆಯಾಗುತ್ತಿದೆ. ಅದೇನೆಂದರೆ ದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿ ಮಾಡೆಲ್‌ ಸೂಚನೆಗೆ ವಿರುದ್ಧವಾಗಿ ಕೂದಲು ಕತ್ತರಿಸಿದ ಸಲೂನ್ ವಿರುದ್ಧ ಆಕೆ ನಡೆಸಿದ ಕಾನೂನು ಹೋರಾಟದಲ್ಲಿ ಜಯ ಸಿಕ್ಕಿದೆ.

ದೆಹಲಿಯ ಅತ್ಯಂತ ಪ್ರತಿಷ್ಠಿತ ಐಟಿಸಿ ಮೌರ್ಯ ಹೋಟೆಲ್‌ನಲ್ಲಿರುವ ಸಲೂನ್‌ಗೆ 2018ರಲ್ಲಿ ಆಶ್ನಾ ರಾಯ್ ಎಂಬ ವೃತ್ತಿಪರ ಮಾಡೆಲ್ ಭೇಟಿ ನೀಡಿದ್ದರು. ಕೂದಲಿನ ವಿನ್ಯಾಸಕ್ಕೆ ಸಂಬಂಧಿಸಿದ ಅನೇಕ ಪ್ರತಿಷ್ಠಿತ ಕಂಪನಿಗಳ ರಾಯಭಾರಿಯಾಗಿದ್ದರು. ಅಂದು ಅವರು ಸಲೂನ್ ಸಿಬ್ಬಂದಿಗೆ ತಮ್ಮ ಕೂದಲನ್ನು ಒಂದು ನಿರ್ದಿಷ್ಟ ಶೈಲಿಯಲ್ಲಿ ಕತ್ತರಿಸಲು ಸ್ಪಷ್ಟವಾಗಿ ಸೂಚಿಸಿದ್ದರು. ಆದರೆ ಅಲ್ಲಿನ ಸಿಬ್ಬಂದಿ ಮಾಡೆಲ್ ನೀಡಿದ ಸೂಚನೆಯನ್ನು ಕಡೆಗಣಿಸಿ, ಕೇವಲ ನಾಲ್ಕು ಇಂಚುಗಳಷ್ಟು ಕೂದಲನ್ನು ಮಾತ್ರ ಉಳಿಸಿ ಮಿಕ್ಕೆಲ್ಲವನ್ನೂ ಅತ್ಯಂತ ಚಿಕ್ಕದಾಗಿ ಕತ್ತರಿಸಿದ್ದರು.ಇದು ಆಕೆಯ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ.

ಯಾಕೆಂದರೆ ಆಶ್ನಾ ರಾಯ್ ಪ್ರಕಾರ, ಅವರ ಉದ್ದನೆಯ ಮತ್ತು ಸುಂದರವಾದ ಕೂದಲೇ ವೃತ್ತಿ ಜೀವನದ ಬಂಡವಾಳವಾಗಿತ್ತು. ಕೂದಲಿನ ವಿನ್ಯಾಸವು ಸಂಪೂರ್ಣವಾಗಿ ಕೆಟ್ಟುಹೋದ ಕಾರಣ, ಅವರು ಮಾಡಿಕೊಂಡಿದ್ದ ಅನೇಕ ದೊಡ್ಡ ಮೊತ್ತದ ಮಾಡೆಲಿಂಗ್ ಒಪ್ಪಂದಗಳು ತಕ್ಷಣವೇ ರದ್ದಾದವು. ಆರ್ಥಿಕವಾಗಿ ಭಾರಿ ಹೊಡೆತ ನೀಡಿದೆ.

ಹೀಗಾಗಿ ಈ ಘಟನೆಯಿಂದಾಗಿ ಅವರು ತೀವ್ರ ಮಾನಸಿಕ ಆಘಾತ ಮತ್ತು ಖಿನ್ನತೆಗೆ ಒಳಗಾದರು. ಅಲ್ಲದೆ ಸಲೂನ್ ಮಾಡಿದ ತಪ್ಪನ್ನು ಸರಿಪಡಿಸಲು ನೀಡಿದ ಕೆಮಿಕಲ್ ಟ್ರೀಟ್‌ಮೆಂಟ್ನಿಂದಾಗಿ ಅವರ ತಲೆಬುರುಡೆಗೆ ಹಾನಿಯಾಗಿತ್ತು ಎಂದು ಅವರು ದೂರಿನಲ್ಲಿ ಉಲ್ಲೇಖಿಸಿದ್ದರು.

ಬಳಿಕ ಆಶ್ನಾ ರಾಯ್ ರಾಷ್ಟ್ರೀಯ ಗ್ರಾಹಕ ವಿವಾದಗಳ ಪರಿಹಾರ ಆಯೋಗದ (NCDRC) ಮೊರೆ ಹೋದರು. ಪ್ರಕರಣದ ವಿಚಾರಣೆ ನಡೆಸಿದ ಆಯೋಗವು, ಸಲೂನ್‌ನ ನಿರ್ಲಕ್ಷ್ಯವನ್ನು ಎತ್ತಿಹಿಡಿಯಿತು. ಹೋಟೆಲ್ ಆಡಳಿತ ಮಂಡಳಿಯು ಮಾಡೆಲ್‌ಗೆ 2 ಕೋಟಿ ರುಪಾಯಿ ಪರಿಹಾರ ನೀಡುವಂತೆ ಆದೇಶಿಸಿತು.

ಆದ್ರೆ ಇದನ್ನು ಪ್ರಶ್ನಿಸಿ ಹೋಟೆಲ್ ಆಡಳಿತ ಮಂಡಳಿಯು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತು. ಸುಪ್ರೀಂ ಕೋರ್ಟ್ ವಿಚಾರಣೆಯ ವೇಳೆ, ಸೇವಾ ನ್ಯೂನತೆ ನಡೆದಿರುವುದು ನಿಜ, ಆದರೆ 2 ಕೋಟಿ ರುಪಾಯಿಗಳ ಪರಿಹಾರ ಮೊತ್ತವು ತುಂಬಾ ಹೆಚ್ಚಾಯಿತು ಎಂದು ಅಭಿಪ್ರಾಯಪಟ್ಟಿದೆ. ಪರಿಹಾರದ ಮೊತ್ತವನ್ನು ಲೆಕ್ಕ ಹಾಕುವಾಗ ಸಂತ್ರಸ್ತೆಯ ಆದಾಯದ ದಾಖಲೆಗಳು ಮತ್ತು ನೈಜ ನಷ್ಟವನ್ನು ಪರಿಗಣಿಸಬೇಕು ಎಂದು ಹೇಳಿದ ನ್ಯಾಯಾಲಯವು ಪರಿಹಾರ ಮೊತ್ತವನ್ನು 2 ಕೋಟಿ ರುಪಾಯಿಯಿಂದ 25 ಲಕ್ಷ ರುಪಾಯಿಗೆ ಇಳಿಸಿ ಆದೇಶ ಪ್ರಕಟಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !