ಹೊಸದಿಗಂತ ಡಿಜಿಟಲ್ ಡೆಸ್ಕ್:
ನದಿ ನೀರು ಕೊಡುತ್ತೇವೆ ಎಂದವರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಬೆಂಗಳೂರಿನ ಕೊಳಚೆ ನೀರು ಹರಿಸಿದರು ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ.
ಪಕ್ಷದ ಕಚೇರಿಯಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದ ಹಿರಿಯ ಮುಖಂಡ ಹಾಗೂ ಪರಾಜಿತ ಅಭ್ಯರ್ಥಿ ಹೂಡಿ ವಿಜಯಕುಮಾರ್ ಅವರ ಪಕ್ಷ ಸೇರ್ಪಡೆ ಹಾಗೂ ಅವರ ನೇತೃತ್ವದ ಸ್ವಾಭಿಮಾನಿ ಜನತಾ ಪಕ್ಷದ ವಿಲೀನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಗೌಡರು ಮಾತನಾಡಿದರು.
ರಾಜಧಾನಿಯ ಕೊಚ್ಚೆ ನೀರನ್ನು ಆ ಎರಡು ಜಿಲ್ಲೆಗಳ ಜನರಿಗೆ ಕೊಟ್ಟಿದ್ದಾರೆ. ಒಂದು ಕಾಲದಲ್ಲಿ ಕೋಲಾರದ ಟೊಮ್ಯಾಟೊ ಎಂದರೆ ಜಗತ್ತಿಗೇ ಪ್ರಸಿದ್ಧಿ. ಆದರೆ, ಈಗ ಅದನ್ನು ತಿನ್ನಬೇಡಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಇದಕ್ಕೆ ಆ ಗಲೀಜು ನೀರು ಮತ್ತು ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ದೂರಿದರು.
ನಾನು ಈ ರಾಜ್ಯದ ಮುಖ್ಯಮಂತ್ರಿ ಆಗುವುದಕ್ಕೆ ಮೊದಲು ಖಜಾನೆ ಖಾಲಿ ಮಾಡಿದ್ದರು. ಸರ್ಕಾರಿ ನೌಕರರಿಗೆ ಸಂಬಳ ಕೊಡಲು ಅಂದಿನ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರು ಕೋಲ್ಕತಾದ ಫಿಯರ್ ಲೆಸ್ ಕಂಪನಿಯಿಂದ 200 ಕೋಟಿ ರು. ಸಾಲ ತಂದಿದ್ದರು. ಅಂಥ ಸಂದರ್ಭದಲ್ಲಿ ನಾನು ಈ ರಾಜ್ಯವನ್ನು ಹೇಗೆ ನಡೆಸಿರಬೇಕು ಎಂಬುದನ್ನು ಊಹೆ ಮಾಡಿಕೊಳ್ಳಿ ಎಂದು ಹೇಳಿದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು ಪಂಚರತ್ನ ಎಂಬ ಅತ್ಯುತ್ತಮ ಯೋಜನೆಗಳನ್ನು ಘೋಷಿಸಿದ್ದರು. ಉಚಿತ ಮನೆ, ಉಚಿತ ಶಿಕ್ಷಣ, ಉಚಿತ ಆರೋಗ್ಯ, ಉದ್ಯೋಗದ ಭರವಸೆ ನೀಡಿದ್ದರು. ಕಾಂಗ್ರೆಸ್ ನವರು ಕೊನೇ ಘಳಿಗೆಯಲ್ಲಿ ಗ್ಯಾರಂಟಿ, ಫ್ರೀ ಫ್ರೀ ಎಂದರು. ಜನ ಮಾರು ಹೋದರು. ಈಗ ನೋಡಿದರೆ ಗ್ಯಾರಂಟಿಗಳು ಬೊಕ್ಕಸಕ್ಕೆ ಹೊರೆ ಆಗುತ್ತವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ ಎಂದು ಮಾಜಿ ಪ್ರಧಾನಿಗಳು ವ್ಯಂಗ್ಯವಾಡಿದರು.



