Sunday, January 11, 2026

ಕಡಲೆ ಬೆಳೆ ಕದಿಯುವಾಗ್ಲೇ ಸಿಕ್ಕಿಬಿದ್ದ ಕಳ್ಳ! ಕಟ್ಟಿಹಾಕಿ ಬೆಳೆ ಹಾರ ಹಾಕಿದ ಜನ

ಹೊಸದಿಗಂತ ವರದಿ ಗದಗ:

ಕಡಲೆ ಬೆಳೆ ಕಳ್ಳತನ ಮಾಡಿದ ಆರೋಪಿ ಹಿಡಿದು ಕಂಬಕ್ಕೆ ಕಟ್ಟಿಹಾಕಿದ ಘಟನೆ ನಗರದ ಹೊರವಲಯದ ಸರ್ವಜ್ಞ ಸರ್ಕಲ್ ನಲ್ಲಿ ನಡೆದಿದೆ. ಹೊಂಬಳ ರಸ್ತೆಯ ರೈತರ ಜಮೀನಿನಲ್ಲಿ ಕಡಲೆ ಬೆಳೆ ಕಳ್ಳತನ ಮಾಡುವ ವೇಳೆ ರೆಡ್ ಹ್ಯಾಂಡ್ ಆಗಿ ರೈತರ ಕೈಗೆ ಸಿಕ್ಕಿಬಿದ್ದಿದ್ದಾನೆ.

30 ವರ್ಷದ ಚಿದಾನಂದ ಛಲವಾದಿ ಎಂಬ ಕಡಲೆ ಬೆಳೆ ಕಳ್ಳನ ಬಂಧನವಾಗಿದೆ. ಇವನು ಕೊಪ್ಪಳ ಜಿಲ್ಲೆ ಗಂಗಾವತಿ ಮೂಲದ ನಿವಾಸಿ ಎನ್ನಲಾಗಿದೆ. ಈ ಖದೀಮರ ಸುಮಾರು ನಾಲ್ಕೈದು ಜನರ ಒಂದು ಟೀಮ್ ಇದೆ ಎನ್ನಲಾಗುತ್ತಿದೆ. ಎಲ್ಲರೂ ಒಟ್ಟಾಗಿ ತಡರಾತ್ರಿ ಅಥವಾ ನಸುಕಿನ ಜಾವ ರೈತರ ಜಮೀನಿಗೆ ನುಗ್ಗುತಾರೆ.

ಇವರು ಟಂ ಟಂ ವಾಹನದೊಂದಿಗೆ ಮಾರಕಾಸ್ತ್ರ, ಖಾರದ ಪುಡಿಗಳನ್ನು ಹಿಡಿದು ರೈತರ ಹೊಲಕ್ಕೆ ನುಗ್ಗಿ ಕಳ್ಳತನ ಮಾಡ್ತಾರೆ. ಯಾರಾದರು ಒಬ್ಬ, ಇಬ್ಬರು ರೈತರು ವಿರೋಧ ಮಾಡಿದ್ರೆ ಅವರ ಮೇಲೆ ಅಟ್ಯಾಕ್ ಮಾಡಿ ಕಳ್ಳತನ ಮಾಡಿಕೊಂಡು ಎಸ್ಕೇಪ್ ಆಗ್ತಾರೆ ಎಂಬ ಆರೋಪ ಈ ರೈತರದ್ದಾಗಿದೆ. ಹೀಗೆ ಕಳೆದ ಒಂದು ವಾರದಿಂದ ಅನೇಕ ರೈತರ ಜಮೀನಿನಲ್ಲಿ ಸಾಕಷ್ಟು ಹಸಿ ಕಡಲೆ ಬೆಳೆ ಕಳ್ಳತನವಾಗುತ್ತಿತ್ತು. ಇಂದು ಸಹ ಹೊಂಬಳ ರಸ್ತೆಯ ರೈಲ್ವೆ ಹಳಿ ಬಳಿ ಇವರ ಚಲನವಲನ ರೈತರಿಗೆ ಅನುಮಾನ ಮೂಡಿಸಿದೆ. ಇತರೆ ರೈತರಿಗೆ ಫೋನ್ ಮಾಡಿ ಮಾಹಿತಿ ನೀಡಿ ರೈತರು ಜಮಾವಣೆ ಆಗುತ್ತಿದ್ದಂತೆ ಮೂರುನಾಲ್ಕು ಜನ ಎಸ್ಕೇಪ್ ಆಗಿದ್ದಾರೆ. ಹಸಿ ಕಡಲೆ ಬೆಳೆ ಮೂಟೆ ಸಮೇತ ಓರ್ವ ಸಿಕ್ಕಿಬಿದ್ದಿದ್ದಾನೆ. ಆತನನ್ನು ಹಿಡಿದು ಸರ್ವಜ್ಞ ಸರ್ಕಲ್ ಕಂಬಕ್ಕೆ ಕಟ್ಟಿಹಾಕಿ, ಕಡಲೆ ಬೆಳೆ ಹಾರ ಮಾಡಿ‌ ಕೊರಳಲ್ಲಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ನಂತರ ರೈತರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಹಸಿ ಕಡಲೆ ಬೆಳೆ ಕಳ್ಳತನ ಮಾಡಿ ಮಾರಾಟ ಮಾಡುವುದೇ ಇವರ ಕಾಯಕವಾದಂತಿದೆ. ಆರೋಪಿ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!