ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿ ಬೆಳಗಿನ ಜಾವ ಕಳ್ಳರ ಕೈಚಳಕ ನಡೆದಿದ್ದು, ಎನ್‌ಟಿಪಿ ಟೀ ಪಾಯಿಂಟ್‌ಗೆ ನುಗ್ಗಿದ ದುಷ್ಕರ್ಮಿಯೊಬ್ಬ 20 ಸಾವಿರ ರೂಪಾಯಿ ನಗದು ಮತ್ತು ಬೀರುವಿನಲ್ಲಿದ್ದ ಸಿಗರೇಟ್ ಪ್ಯಾಕ್‌ಗಳನ್ನು ಕದ್ದು ಪರಾರಿಯಾಗಿದ್ದಾನೆ.
ಸೋಮವಾರ ಬೆಳಗಿನ ಜಾವ ಸುಮಾರು 4 ಗಂಟೆಯ ಸುಮಾರಿಗೆ ಈ ಕಳ್ಳತನ ನಡೆದಿದೆ ಎನ್ನಲಾಗಿದೆ. ಚೋರರು ಮೊದಲು ಅಂಗಡಿಯ ರೋಲಿಂಗ್ ಶೆಟರ್‌ನ ಬೀಗವನ್ನು ಮುರಿದು ಒಳನುಗ್ಗಿದ್ದಾರೆ. ಕಳ್ಳರ ಪೈಕಿ ಓರ್ವ ಅಂಗಡಿಯೊಳಗೆ ಪ್ರವೇಶಿಸಿ, ಗಲ್ಲಾಪೆಟ್ಟಿಗೆಯಲ್ಲಿದ್ದ ಸಂಪೂರ್ಣ ಹಣವನ್ನು ಹಾಗೂ ಬೀರುವಿನಲ್ಲಿ ಸಂಗ್ರಹಿಸಿಟ್ಟಿದ್ದ ಸಿಗರೇಟ್ ಪ್ಯಾಕ್‌ಗಳನ್ನು ಲಪಟಾಯಿಸಿ, ನಂತರ ಹೊರಬಂದು, ರೋಲಿಂಗ್ ಶೆಟರ್‌ನ್ನು ಹಾಗೆಯೇ ಬಿಟ್ಟು ಎಸ್ಕೇಪ್ ಆಗಿದ್ದಾನೆ.
ಬೆಳಗ್ಗೆ ಅಂಗಡಿ ಮಾಲೀಕರು ಬಂದಾಗ ಬಾಗಿಲು ಸಂಪೂರ್ಣವಾಗಿ ಮುಚ್ಚದೇ ತೆರೆದಿದ್ದನ್ನು ಕಂಡು ಒಳಗೆ ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಕಳ್ಳತನದ ಈ ಸಂಪೂರ್ಣ ದೃಶ್ಯವು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಘಟನಾ ಸ್ಥಳಕ್ಕೆ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

