ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಬಜೆಟ್ 2026ನ್ನು ದೂರದರ್ಶಿತ್ವ ಹೊಂದಿದ ಮತ್ತು ವಿಕಸಿತ ಭಾರತದ ಕನಸಿಗೆ ದಿಕ್ಕು ತೋರಿಸುವ ದಾಖಲೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಶ್ಲಾಘಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಈ ಬಜೆಟ್ ಮುಂದಿನ ದಶಕದಲ್ಲಿ ಜಗತ್ತಿನಲ್ಲಿ ನಡೆಯಲಿರುವ ಬದಲಾವಣೆಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾಗಿದೆ ಎಂದು ಅವರು ಹೇಳಿದರು.
ಎಐ, ಇವಿ, ಹೊಸ ತಂತ್ರಜ್ಞಾನ ಕ್ರಾಂತಿ ಸೇರಿದಂತೆ ಭವಿಷ್ಯದ ಪ್ರಮುಖ ಕ್ಷೇತ್ರಗಳಿಗೆ ಒತ್ತು ನೀಡಲಾಗಿದ್ದು, ಯುವಕರನ್ನು ಮುಂದಿನ ದಿನಗಳಿಗೆ ಸಜ್ಜುಗೊಳಿಸುವ ಸ್ಪಷ್ಟ ನಿಲುವು ಬಜೆಟ್‌ನಲ್ಲಿ ಗೋಚರಿಸುತ್ತದೆ. ಇದು ಸಮಾಜದ ಒಟ್ಟು ಸುಧಾರಣೆಗೆ ಸಹಕಾರಿಯಾಗಲಿದೆ ಎಂದು ತೇಜಸ್ವಿ ಸೂರ್ಯ ಅಭಿಪ್ರಾಯಪಟ್ಟರು.
ಕರ್ನಾಟಕ, ವಿಶೇಷವಾಗಿ ಬೆಂಗಳೂರಿಗೆ ಈ ಬಜೆಟ್ ಮಹತ್ವದ ಕೊಡುಗೆಗಳನ್ನು ನೀಡಿದೆ ಎಂದು ಅವರು ತಿಳಿಸಿದರು. ತೆಂಗು ಮತ್ತು ಗೋಡಂಬಿ ಬೆಳೆಗಾರರಿಗೆ ಪ್ರೋತ್ಸಾಹ, ಜವಳಿ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಇದರೊಂದಿಗೆ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದರು.
ಬೆಂಗಳೂರು–ಹೈದರಾಬಾದ್–ಚೆನ್ನೈ ಹೈ ಸ್ಪೀಡ್ ರೈಲು ಕಾರಿಡಾರ್ ಘೋಷಣೆಯು ಐಟಿ ಕ್ಷೇತ್ರಕ್ಕೆ ದೊಡ್ಡ ಬಲ ನೀಡಲಿದೆ. ವೇಗವಾಗಿ ಬೆಳೆಯುತ್ತಿರುವ ನಗರವಾದ ಬೆಂಗಳೂರಿಗೆ ಈ ಬಜೆಟ್‌ನಲ್ಲಿ ಸಿಂಹಪಾಲು ದೊರೆತಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು. ದೇಶದ ವಿವಿಧ ಭಾಗಗಳಲ್ಲಿ ನಿಮಾನ್ಸ್ ಸ್ಥಾಪನೆಯೂ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ಹೇಳಿದರು.



