ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾತ್ಯತೀತ ಜನತಾದಳ ಪಕ್ಷದ 25ನೇ ವರ್ಷದ ಸವಿನೆನಪಿಗಾಗಿ ಕೊಮ್ಮಘಟ್ಟದಲ್ಲಿ ಆಯೋಜಿಸಲಾಗಿದ್ದ ‘ಬೆಳ್ಳಿ ಹಬ್ಬ’ ಸಮಾವೇಶದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಅಕ್ಷರಶಃ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ನೇತೃತ್ವದ ಆಡಳಿತವನ್ನು “ನಾಡು ಕಂಡ ಅತ್ಯಂತ ಕೆಟ್ಟ ಸರ್ಕಾರ” ಎಂದು ಕರೆಯುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ನೋಡಿ ಕಲಿಯಬೇಕು ಎಂದು ದೇವೇಗೌಡರು ಟೀಕಿಸಿದರು. ಬಿಹಾರದಲ್ಲಿ ನಿತೀಶ್ ಕುಮಾರ್ ಅವರಿಗೆ ಶಕ್ತಿ ನೀಡಿದ್ದೇ ಮೋದಿ ಎಂದು ಶ್ಲಾಘಿಸಿದ ಅವರು, ಸಿದ್ದರಾಮಯ್ಯನವರು ಕೇವಲ ಅಧಿಕಾರಕ್ಕಾಗಿ ಕುತಂತ್ರ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. “ಈ ಸರ್ಕಾರ ಇನ್ನು ಕೇವಲ ಎರಡು ವರ್ಷ ಇರಬಹುದು” ಎಂದು ಹೇಳುವ ಮೂಲಕ ಸರ್ಕಾರದ ಪತನದ ಭವಿಷ್ಯವನ್ನೂ ನುಡಿದರು.
ಕೇಂದ್ರ ಸಚಿವರಾಗಿ ಕುಮಾರಸ್ವಾಮಿಯವರು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದರೂ, ರಾಜ್ಯ ಸರ್ಕಾರ ಅವರಿಗೆ ಸಹಕಾರ ನೀಡುತ್ತಿಲ್ಲ. ಎಚ್‌ಎಂಟಿ ಜಾಗದ ವಿಷಯದಲ್ಲಿ ಬೇಕೆಂದೇ ಕೋರ್ಟ್ ಮೆಟ್ಟಿಲೇರಿ ಅಡ್ಡಿಪಡಿಸಲಾಗುತ್ತಿದೆ. ರಾಷ್ಟ್ರೀಯ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಾಗ ಕೆಲವು ಇತಿಮಿತಿಗಳಿದ್ದರೂ, ರಾಜ್ಯದ ಹಿತದೃಷ್ಟಿಯಿಂದ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಗೌಡರು ಸ್ಪಷ್ಟಪಡಿಸಿದರು.



