February 1, 2026
Sunday, February 1, 2026
spot_img

ಇದು ಒಳ್ಳೆ ಜನಹಿತ ಬಜೆಟ್‌! ಕೇಂದ್ರ ಆಯವ್ಯಯಕ್ಕೆ ರಾಜ್ಯ ಬಿಜೆಪಿ ನಾಯಕರ ಬಹುಪರಾಕ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ 2026-27ನೇ ಸಾಲಿನ ಆರ್ಥಿಕ ಬಜೆಟ್​ ಮಂಡಿಸಿದರು. ಇದಕ್ಕೆ ರಾಜ್ಯ ಬಿಜೆಪಿ ನಾಯಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ಜನಹಿತದ ಬಜೆಟ್ ಎಂದು ಶ್ಲಾಘಿಸಿದ್ದಾರೆ.

ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿದ ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರು ನಿರ್ಮಲಾ‌ ಸೀತಾರಾಮನ್ ಒಂಭತ್ತನೇ ಬಾರಿಗೆ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿಯ ಬಜೆಟ್ ಇದು. ರಾಷ್ಟ್ರದ ಸಾರ್ವಭೌಮತೆ ಎತ್ತಿ ಹಿಡಿದ ಬಜೆಟ್. 25 ಕೋಟಿ ಜನ ಕಳೆದ ಹತ್ತು ವರ್ಷಗಳಲ್ಲಿ ಬಡತನ ರೇಖೆಯಿಂದ ಹೊರಗೆ ಬಂದಿದ್ದಾರೆ. ಬಜೆಟ್ ನಲ್ಲಿ ಮೀನುಗಾರಿಕಾ ವಲಯಕ್ಕೆ ಉತ್ತೇಜನ ಕೊಡಲಾಗಿದೆ. ಶ್ರೀಗಂಧ ಬೆಳೆಗೆ ವಿಶೇಷ ಯೋಜನೆ ಮಾಡಲಾಗಿದೆ. ಬಂಡವಾಳ ವೆಚ್ಚವನ್ನು ಬಜೆಟ್ ನಲ್ಲಿ ಹೆಚ್ಚಿಸಲಾಗಿದೆ. ರಸಗೊಬ್ಬರ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳ ಮೇಲಿನ ಆಮದು ಸುಂಕ ಕಡಿಮೆ ಆಗಿದೆ ಎಂದರು.

ಇದೇ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಜನಪ್ರಿಯ ಬಜೆಟ್ ಬದಲು ಜನ ಹಿತದ ಕಡೆ ಬಜೆಟ್ ಗಮನ ಕೊಟ್ಟಿದೆ. ಹೆಣ್ಣುಮಕ್ಕಳ ಶಿಕ್ಷಣಕ್ಕೆ ಕೇಂದ್ರವೇ ಹಾಸ್ಟೆಲ್ ಸ್ಥಾಪಿಸಲು ಮುಂದೆ ಬಂದಿದೆ. ಶ್ರೀಗಂಧ‌ ಬೆಳೆಗೆ ಉತ್ತೇಜನ ಕೊಡಲು ಕೇಂದ್ರ ಮುಂದಾಗಿದೆ. ತೆಂಗು ಅಭಿವೃದ್ಧಿಗೂ ಉತ್ತೇಜನ ನೀಡಲಾಗಿದೆ. ಟೂರಿಸ್ಟ್ ಗೈಡ್​​ಗಳಿಗೆ ತರಬೇತಿ ನೀಡಲು ಶಾಲೆ, ಕ್ಯಾನ್ಸರ್ ಔಷಧಿಗೆ ತೆರಿಗೆ ವಿನಾಯಿತಿ ಕೊಡಲಾಗಿದೆ. ಇದು ಜನಹಿತದ ಬಜೆಟ್, ತೆರಿಗೆ ಹೊರೆ ಹಾಕದ ಬಜೆಟ್ ಎಂದು ತಿಳಿಸಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !