ಹೊಸದಿಗಂತ ಡಿಜಿಟಲ್ ಡೆಸ್ಕ್:
ವ್ಯಾಪಾರ ಮತ್ತು ಭೌಗೋಳಿಕ ರಾಜಕೀಯ ಕಾರಣಗಳಿಂದ ಇತ್ತೀಚೆಗೆ ಭಾರತ–ಅಮೆರಿಕ ಸಂಬಂಧಗಳಲ್ಲಿ ಉದ್ವಿಗ್ನತೆ ಕಂಡುಬಂದಿತ್ತು. ಇದೀಗ ಆ ಉದ್ವಿಗ್ನತೆ ತಗ್ಗುವ ಲಕ್ಷಣಗಳು ಗೋಚರವಾಗಿವೆ. ಭಾರತದ ಮೇಲೆ ವಿಧಿಸಿದ್ದ 25 ಶೇಕಡಾ ಹೆಚ್ಚುವರಿ ಸುಂಕವನ್ನು ಹಿಂಪಡೆಯುವ ಬಗ್ಗೆ ಅಮೆರಿಕ ಆಡಳಿತ ಚಿಂತನೆ ನಡೆಸುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ. ರಷ್ಯಾದಿಂದ ಭಾರತ ತೈಲ ಖರೀದಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಹೆಚ್ಚುವರಿ ಸುಂಕ ವಿಧಿಸಿತ್ತು. ಆದರೆ ಆ ಸುಂಕ ಜಾರಿಯಾದ ನಂತರ ರಷ್ಯಾ ತೈಲ ಖರೀದಿಯಲ್ಲಿ ಭಾರತ ಗಣನೀಯವಾಗಿ ಕಡಿತ ತಂದಿದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ ಭಾರತದ ಕೆಲವು ವಸ್ತುಗಳ ಮೇಲೆ ಒಟ್ಟು 50 ಶೇಕಡಾ ಸುಂಕ ಜಾರಿಯಲ್ಲಿದ್ದು, ಇದು ಶಾಶ್ವತ ಕ್ರಮವಲ್ಲ ಎಂಬ ಸಂದೇಶವನ್ನೂ ಅವರು ನೀಡಿದ್ದಾರೆ.
ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ಮತ್ತು ದ್ವಿಪಕ್ಷೀಯ ಮಾತುಕತೆಗಳು ಸಕಾರಾತ್ಮಕವಾಗಿ ಸಾಗಿದರೆ, ಹೆಚ್ಚುವರಿ 25 ಶೇಕಡಾ ಸುಂಕವನ್ನು ಭವಿಷ್ಯದಲ್ಲಿ ತೆಗೆದುಹಾಕುವ ಸಾಧ್ಯತೆ ಇದೆ ಎಂದು ಅಮೆರಿಕ ಸ್ಪಷ್ಟಪಡಿಸಿದೆ. ಈ ನಿರ್ಧಾರದಿಂದ ಭಾರತಕ್ಕೆ ವ್ಯಾಪಾರದಲ್ಲಿ ತಾತ್ಕಾಲಿಕವಾದ ನಿರಾಳತೆ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.



