ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿಯ ಕಾವು ಈಗಿನಿಂದಲೇ ಶುರುವಾಗಿದೆ. ಸರಣಿಯ ಸಿದ್ಧತೆಗಾಗಿ ಬುಧವಾರ ಸಂಜೆ ಗುಜರಾತ್‌ನ ವಡೋದರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಟೀಂ ಇಂಡಿಯಾದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಗಳು ಅಭೂತಪೂರ್ವ ಸ್ವಾಗತ ಕೋರಿದರು. ಆದರೆ, ಇದೇ ವೇಳೆ ನೆರೆದಿದ್ದ ಸಾವಿರಾರು ಅಭಿಮಾನಿಗಳ ಸಾಗರವನ್ನು ದಾಟಿ ಕಾರು ಹತ್ತಲು ಕೊಹ್ಲಿ ಸಾಕಷ್ಟು ಹರಸಾಹಸ ಪಡಬೇಕಾಯಿತು.
ಜನವರಿ 11 ರಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ವಿರಾಟ್ ಕೊಹ್ಲಿ ವಡೋದರಾ ತಲುಪಿದ್ದಾರೆ. ಕೊಹ್ಲಿ ಬರುವ ವಿಷಯ ಮೊದಲೇ ತಿಳಿದಿದ್ದ ಅಭಿಮಾನಿಗಳು ವಿಮಾನ ನಿಲ್ದಾಣದ ಹೊರಗೆ ದೊಡ್ಡ ಸಂಖ್ಯೆಯಲ್ಲಿ ಜಮಾಯಿಸಿದ್ದರು. ವಿರಾಟ್ ಹೊರಬರುತ್ತಿದ್ದಂತೆ ‘ಕೊಹ್ಲಿ.. ಕೊಹ್ಲಿ..’ ಎಂಬ ಘೋಷಣೆಗಳು ಮೊಳಗಿದವು. ಪ್ರತಿಯೊಬ್ಬರೂ ತಮ್ಮ ನೆಚ್ಚಿನ ಆಟಗಾರನೊಂದಿಗೆ ಸೆಲ್ಫಿ ಪಡೆಯಲು ಮುಗಿಬಿದ್ದಿದ್ದರಿಂದ ಪರಿಸ್ಥಿತಿ ನಿಯಂತ್ರಣ ಮೀರಿತು.
ಹೆಚ್ಚಾದ ಜನದಟ್ಟಣೆಯಿಂದಾಗಿ ವಿರಾಟ್ ಕೊಹ್ಲಿ ತಮ್ಮ ಕಾರಿನತ್ತ ಸಾಗಲು ದಾರಿ ಸಿಗದೆ ಪರದಾಡಿದರು. ಕೂಡಲೇ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿಗಳು ಕೊಹ್ಲಿ ಸುತ್ತ ರಕ್ಷಣಾ ಕವಚ ನಿರ್ಮಿಸಿ ಅವರನ್ನು ಸುರಕ್ಷಿತವಾಗಿ ಕಾರಿನ ಬಳಿ ಕರೆದೊಯ್ದರು. ಜನಸಂದಣಿಯ ಒತ್ತಡಕ್ಕೆ ವಿರಾಟ್ ಸ್ವಲ್ಪ ಕಸಿವಿಸಿಗೊಂಡರಾದರೂ, ಎಲ್ಲೂ ತಾಳ್ಮೆ ಕಳೆದುಕೊಳ್ಳದೆ ಮುಗುಳ್ನಗುತ್ತಲೇ ಕೆಲ ಅಭಿಮಾನಿಗಳಿಗೆ ಫೋಟೋ ನೀಡಿದರು. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿರಾಟ್ ಅವರ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಹುಚ್ಚು ಅಭಿಮಾನಕ್ಕೆ ಸಾಕ್ಷಿಯಾಗಿದೆ.

