ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಮೌನಿ ರಾಯ್ ಅವರಿಗೆ ಸಾರ್ವಜನಿಕ ಕಾರ್ಯಕ್ರಮದ ವೇಳೆ ಅಸಹ್ಯಕರ ಅನುಭವ ಎದುರಾಗಿರುವ ಬಗ್ಗೆ ಅವರು ಸ್ವತಃ ಬಹಿರಂಗಪಡಿಸಿದ್ದಾರೆ. ಹರಿಯಾಣದ ಕರ್ನಾಲ್‌ನಲ್ಲಿ ನಡೆದ ಖಾಸಗಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹಾಜರಾಗಿದ್ದ ವೇಳೆ, ಕೆಲವು ವಯಸ್ಸಾದ ವ್ಯಕ್ತಿಗಳ ವರ್ತನೆ ತೀವ್ರ ಅಸಮಾಧಾನ ತಂದಿದೆ ಎಂದು ಮೌನಿ ರಾಯ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ವೇದಿಕೆಗೆ ಏರಿದ ಸಂದರ್ಭದಲ್ಲಿ ಕುಟುಂಬದ ಸದಸ್ಯರಂತೆ ಕಾಣಿಸಿಕೊಂಡ ಕೆಲವರು ಫೋಟೋ ತೆಗೆಯುವ ನೆಪದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ವಯಸ್ಸಾದ ಪುರುಷರು ನನ್ನ ಸೊಂಟದ ಮೇಲೆ ಕೈ ಹಾಕಿ ಚಿತ್ರಗಳನ್ನು ತೆಗೆದರು… ‘ಸರ್ ದಯವಿಟ್ಟು ನಿಮ್ಮ ಕೈ ತೆಗೆಯಿರಿ’ ಎಂದು ನಾನು ಹೇಳಿರೂ, ಆ ವ್ಯಕ್ತಿಗಳು ತಮ್ಮ ವರ್ತನೆ ನಿಲ್ಲಿಸಲಿಲ್ಲ ಎಂದು ಮೌನಿ ಹೇಳಿದ್ದಾರೆ. ವಿರೋಧ ವ್ಯಕ್ತಪಡಿಸಿದ ಬಳಿಕವೂ ಕೆಟ್ಟ ಸನ್ನೆಗಳು, ಹೂವು ಎಸೆದು ಅವಮಾನಿಸುವ ಪ್ರಯತ್ನ ಮುಂದುವರಿದಿದೆ ಎಂದು ಅವರು ವಿವರಿಸಿದ್ದಾರೆ.
ಘಟನೆಯಿಂದ ತೀವ್ರ ನೋವಾಗಿದೆ ಎಂದು ಹೇಳಿರುವ ಮೌನಿ, ಮಧ್ಯದಲ್ಲೇ ಕಾರ್ಯಕ್ರಮ ಬಿಟ್ಟು ಹೋಗಬೇಕೆಂದು ನಿರ್ಧರಿಸಿದ್ದರೂ ವೃತ್ತಿಪರ ಹೊಣೆಗಾರಿಕೆಯ ಕಾರಣ ಮರಳಿ ವೇದಿಕೆಗೆ ಬಂದೆ ಎಂದಿದ್ದಾರೆ. ಆದರೆ ಅಲ್ಲಿ ಕೂಡ ಅಸಭ್ಯ ವರ್ತನೆ ನಿಂತಿಲ್ಲ ಎಂಬುದು ಅವರ ಬೇಸರ.
“ನನ್ನಂತಹವರಿಗೆ ಈ ಪರಿಸ್ಥಿತಿ ಎದುರಾದರೆ, ಹೊಸ ನಟಿಯರ ಸ್ಥಿತಿ ಏನಾಗಬಹುದು?” ಎಂದು ಪ್ರಶ್ನಿಸಿರುವ ಮೌನಿ, ಮಹಿಳೆಯರ ಬಗ್ಗೆ ಗೌರವ ಇಲ್ಲದ ಇಂಥ ವರ್ತನೆಗಳ ವಿರುದ್ಧ ಕಠಿಣ ಕ್ರಮ ಅಗತ್ಯ ಎಂದು ಆಗ್ರಹಿಸಿದ್ದಾರೆ. ದೇಶ ಮತ್ತು ಸಂಸ್ಕೃತಿಯ ಮೇಲೆ ಪ್ರೀತಿ ಇದೆ, ಆದರೆ ಇಂತಹ ಘಟನೆಗಳು ಮನಸ್ಸಿಗೆ ಆಘಾತ ನೀಡುತ್ತವೆ ಎಂದು ಅವರು ಹೇಳಿದ್ದಾರೆ.



