ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈನಲ್ಲಿ ನಡೆದ ಏಷ್ಯಾ ಕಪ್ 2025 ಪಂದ್ಯದಲ್ಲಿ ಭಾರತ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿ ಶಕ್ತಿಶಾಲಿ ಗೆಲುವು ದಾಖಲಿಸಿದೆ. ಆದರೆ, ಈ ಪಂದ್ಯದಲ್ಲಿ ಕ್ರಿಕೆಟ್ ಮೈದಾನದಲ್ಲಿ ನಡೆದ ಒಂದು ಘಟನೆ ದೊಡ್ಡ ಚರ್ಚೆಗೆ ಕಾರಣವಾಯಿತು. ಟಾಸ್ ಸಮಯದಲ್ಲೂ, ಪಂದ್ಯ ಅಂತ್ಯವಾದ ನಂತರವೂ, ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಪಾಕ್ ನಾಯಕ ಸಲ್ಮಾನ್ ಆಘಾ ಅವರೊಂದಿಗೆ ಹಸ್ತಲಾಘನ ಮಾಡದೇ ನಿರ್ಲಕ್ಷಿಸಿದ ಘಟನೆ ರಾಜಕೀಯ ಮತ್ತು ಕ್ರೀಡಾ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಈ ಬೆಳವಣಿಗೆ ಹಿನ್ನೆಲೆಯಲ್ಲಿ ಪಾಕಿಸ್ತಾನ ತಂಡದ ವ್ಯವಸ್ಥಾಪಕ ನವೀದ್ ಅಖ್ತರ್ ಚೀಮಾ, ಟೀಂ ಇಂಡಿಯಾದ ವಿರುದ್ಧ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ಗೆ(Asian Cricket Council) ಅಧಿಕೃತ ದೂರು ಸಲ್ಲಿಸಿದ್ದಾರೆ. ಮ್ಯಾಚ್ ರೆಫರಿಯ ವರ್ತನೆಯ ಮೇಲೂ ಅವರು ಅಸಮಾಧಾನ ವ್ಯಕ್ತಪಡಿಸಿ ಅಧಿಕೃತವಾಗಿ ಪ್ರತಿಭಟನೆ ದಾಖಲಿಸಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮಾಧ್ಯಮಗಳಿಗೆ ತಿಳಿಸಿದೆ.
ಪಂದ್ಯದ ನಂತರ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಸೂರ್ಯಕುಮಾರ್ ಯಾದವ್ ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, ಈ ಗೆಲುವು ‘ದೇಶಕ್ಕೆ ಸಲ್ಲಿಸಿದ ದೊಡ್ಡ ಉಡುಗೊರೆ’ ಎಂದು ಹೇಳಿದ್ದಾರೆ. “ಸಂತ್ರಸ್ತರ ಕುಟುಂಬಗಳೊಂದಿಗೆ ನಾವಿದ್ದೇವೆ. ಸಶಸ್ತ್ರ ಪಡೆಗಳಿಗೆ ಈ ಗೆಲುವು ಅರ್ಪಿಸುತ್ತೇವೆ,” ಎಂದು ಸೂರ್ಯ ಹೇಳಿದರು. ಅವರ ಈ ಹೇಳಿಕೆ ಕ್ರಿಕೆಟ್‌ಗೆ ಮೀರಿದ ರಾಷ್ಟ್ರೀಯ ಸಂದೇಶವಾಗಿ ಹೊರಹೊಮ್ಮಿತು.