ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾರಿ ಹಬ್ಬದ ಸಂಭ್ರಮದಲ್ಲಿದ್ದ ಆ ಕುಟುಂಬದಲ್ಲಿ ಈಗ ಮೌನ ಆವರಿಸಿದೆ. ಸಂಬಂಧಿಕರ ಮನೆಗೆ ಹಬ್ಬಕ್ಕೆಂದು ಬಂದಿದ್ದ ಒಂದೇ ಕುಟುಂಬದ ನಾಲ್ವರು ಭದ್ರಾ ನಾಲೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘೋರ ಘಟನೆ ತಾಲೂಕಿನ ಅರಬಿಳಚಿ ಕ್ಯಾಂಪ್ ಬಳಿ ನಡೆದಿದೆ.
ಶಿಕಾರಿಪುರ ತಾಲೂಕಿನ ಬೆಂಡೆಕಟ್ಟೆ ಗ್ರಾಮದ ನೀಲಾ ಬಾಯಿ (50), ಇವರ ಮಕ್ಕಳಾದ ರವಿ (23), ಶ್ವೇತಾ (24) ಮತ್ತು ಅಳಿಯ ಪರಶುರಾಮ (28) ಮೃತಪಟ್ಟ ದುರ್ದೈವಿಗಳು. ಅರಬಿಳಚಿ ಕ್ಯಾಂಪ್‌ನಲ್ಲಿರುವ ಸಂಬಂಧಿಕರ ಮನೆಗೆ ಹಬ್ಬಕ್ಕಾಗಿ ಆಗಮಿಸಿದ್ದ ಇವರು, ಬಟ್ಟೆ ತೊಳೆಯಲೆಂದು ನಾಲೆಗೆ ತೆರಳಿದ್ದರು.
ಈ ಸಂದರ್ಭದಲ್ಲಿ ಕುಟುಂಬದ ಒಬ್ಬ ಸದಸ್ಯ ಕಾಲು ಜಾರಿ ವೇಗವಾಗಿ ಹರಿಯುತ್ತಿದ್ದ ನಾಲೆಯ ನೀರಿಗೆ ಬಿದ್ದಿದ್ದಾರೆ. ಅವರನ್ನು ರಕ್ಷಿಸಲು ಹೋದ ಉಳಿದ ಮೂವರೂ ಕೂಡ ನೀರಿನ ಸೆಳೆತಕ್ಕೆ ಸಿಲುಕಿ ಜಲಸಮಾಧಿಯಾಗಿದ್ದಾರೆ. ಒಂದೇ ಕುಟುಂಬದ ನಾಲ್ವರು ಕಣ್ಣಮುಂದೆಯೇ ನೀರುಪಾಲಾದುದನ್ನು ಕಂಡು ಗ್ರಾಮಸ್ಥರು ಕಂಗಾಲಾಗಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಹೊಳೆಹೊನ್ನೂರು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಶವಗಳಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.


