ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವ ಪ್ರಿಯಾಂಕ್ ಖರ್ಗೆ ಮುಖ್ಯಮಂತ್ರಿಗೆ ಪತ್ರ ಬರೆದು, ಸರ್ಕಾರಿ ಸ್ಥಳದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಕಾರ್ಯಕ್ರಮ ನಿಷೇಧಿಸಲು ವಿನಂತಿಸಿದ್ದರಿಂದ ವಿವಾದ ಉಂಟಾಗಿದೆ. ಈ ಹಿನ್ನೆಲೆ ಅವರಿಗೆ ಬೆದರಿಕೆ ಕರೆಗಳು ಬಂದಿದ್ದು, ಅವಾಚ್ಯ ಶಬ್ದಗಳಿಂದ ನಿಂದನೆಯೂ ನಡೆದಿರುವುದಾಗಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ತಿಳಿಸಿದ್ದಾರೆ.
ಈ ಘಟನೆ ಕುರಿತು ಮಾತನಾಡಿದ ಗೃಹ ಸಚಿವ ಡಾ.ಜಿ. ಪರಮೇಶ್ವರ್ “ಪ್ರಿಯಾಂಕ್ ಖರ್ಗೆಗೆ ಬಂದಿರುವ ಬೆದರಿಕೆ ಕರೆಗಳ ಮೂಲ ಪತ್ತೆಹಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಕರೆ ಮಾಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಇಂತಹ ಘಟನೆಗಳು ಮುಂದುವರಿಯದಂತೆ ಸರ್ಕಾರ ಕಠಿಣ ನಿಲುವು ತೆಗೆದುಕೊಳ್ಳಲಿದೆ” ಎಂದು ಸ್ಪಷ್ಟಪಡಿಸಿದರು.
ಆರ್‌ಎಸ್‌ಎಸ್ ಶಾಖೆಗಳನ್ನು ಸರ್ಕಾರಿ ಸ್ಥಳಗಳಲ್ಲಿ ಆಯೋಜಿಸುವ ಬಗ್ಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿರುವುದನ್ನು ಅವರು ತಮ್ಮ ಅಭಿಪ್ರಾಯದ ಭಾಗವೆಂದು ಹೇಳಿದ ಪರಮೇಶ್ವರ್, ಸರ್ಕಾರ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿದೆ, ಆದರೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗೊಳ್ಳಲಿದ್ದಾರೆ ಎಂದೂ ಅವರು ತಿಳಿಸಿದರು.