ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ 25 ಕಾಂಗ್ರೆಸ್ ಸಂಸದರಿಗೆ ಸಾಮಾಜಿಕ ಜಾಲತಾಣದ ಮೂಲಕ ಕೊಲೆ ಬೆದರಿಕೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ರಾಜಸ್ಥಾನದ ಪೊಲೀಸರು ಬಂಧಿಸಿದ್ದಾರೆ.
ರಾಜ್ ಸಿಂಗ್ ಅಮೇರಾ ಬಂಧಿತ ಆರೋಪಿ. ಕೋಟಾದವನಾದ ಈತ, ತಾನು ಕರ್ಣಿ ಸೇನೆಯ ಸದಸ್ಯನೆಂದು ವಿಡಿಯೋದಲ್ಲಿ ಹೇಳಿಕೊಂಡಿರುವುದಾಗಿ ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಮತ್ತು ಐಸಿಸಿ ಸದಸ್ಯ ಪವನ್ ಖೇರಾ ತಿಳಿಸಿದ್ದಾರೆ.
ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಕೋಟಾ ನಗರ ಪೊಲೀಸರು, ರಾಜ್ ಸಿಂಗ್ ಅಮೇರಾನನ್ನು ಕೋಟಾದಲ್ಲಿ ಬಂಧಿಸಿದ್ದಾರೆ.
ಪೊಲೀಸರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ರಾಜ್ ಸಿಂಗ್ನನ್ನು ಬಂಧಿಸಿದ್ದಾರೆ. ಆರೋಪಿ ಯಾವ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಬಗ್ಗೆ ಇನ್ನೂ ಗೊತ್ತಾಗಿಲ್ಲ. ಹೆಚ್ಚಿನ ತನಿಖೆಯ ನಂತರವೇ ಮಾಹಿತಿ ಗೊತ್ತಾಗಲಿವೆ. ಆದರೆ, ವೈರಲ್ ವಿಡಿಯೋ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ. ಲಭ್ಯವಿರುವ ಮಾಹಿತಿ ಪ್ರಕಾರ, ರಾಜ್ ಸಿಂಗ್ ಅಮೇರಾ ವಿರುದ್ಧ ಈಗಾಗಲೇ ನಾಲ್ಕು ಪ್ರಕರಣ ದಾಖಲಾಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇತ್ತ ಕಾಂಗ್ರೆಸ್ ನಾಯಕ ಪವನ್ ಖೇರಾ, ಇದು ಆರ್‌ಎಸ್‌ಎಸ್-ಬಿಜೆಪಿ ಪರಿಸರ ವ್ಯವಸ್ಥೆಯ “ಗೋಡ್ಸೆ ಕಾರ್ಖಾನೆ” ಎಂದು ಟೀಕಿಸಿದ್ದಾರೆ. ಅಲ್ಲದೇ, ಇದೊಂದು ಯೋಜಿತ ಪಿತೂರಿಯ ಭಾಗ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ರಾಕೇಶ್ ಜೈನ್ ಪ್ರತಿಕ್ರಿಯಿಸಿ, ರಾಜ್ ಸಿಂಗ್ ಅಮೇರಾಗೆ ಬಿಜೆಪಿಯೊಂದಿಗೆ ಯಾವುದೇ ಸಂಬಂಧವಿಲ್ಲ. ಆತ ಬಿಜೆಪಿ ಸದಸ್ಯನೂ ಅಲ್ಲ. ಈ ಪ್ರಕರಣದಲ್ಲಿ ಪೊಲೀಸರು ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ. ರಜಪೂತ್ ಕರ್ಣಿ ಸೇನೆ ಕೂಡ ಆರೋಪಿ ಯುವಕನಿಂದ ದೂರ ಉಳಿದಿದೆ.



