January17, 2026
Saturday, January 17, 2026
spot_img

ಮಕ್ಕಳನ್ನು ಕೊಲ್ಲೋಕೆ ಶಾಲೆಯ ನೀರಿನ ಟ್ಯಾಂಕ್​​ಗೆ ವಿಷ ಹಾಕಿದ ದುರುಳರು: ಮೂವರು ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಕ್ಕಳ ಶಿಕ್ಷಣದ ಮಂದಿರವೇ ವಿಷದ ಪಾಠದ ಕೇಂದ್ರವಾಗಿ ಮಾರ್ಪಟ್ಟ ಘಟನೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ಗೆ ಉದ್ದೇಶಪೂರ್ವಕವಾಗಿ ವಿಷ ಹಾಕಿ, ಮಕ್ಕಳ ಪ್ರಾಣಕ್ಕೆ ಸಂಚಕಾರ ತಂದ ಘಟನೆ ಇಡೀ ಗ್ರಾಮವನ್ನು ಬೆಚ್ಚಿಬೀಳುವಂತೆ ಮಾಡಿದೆ.

ಸರ್ಕಾರಿ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 41 ವಿದ್ಯಾರ್ಥಿಗಳು ಓದುತ್ತಿದ್ದು, ಇತ್ತೀಚೆಗೆ 12 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಶಾಲೆಗೆ ಭೇಟಿ ನೀಡಿದ ಪೊಲೀಸರಿಗೆ ನೀರಿನ ಟ್ಯಾಂಕ್ ಬಳಿ ಬಿದ್ದಿದ್ದ ಬಾಟಲ್ ಶಂಕೆ ಹುಟ್ಟಿಸಿತು. ತನಿಖೆ ನಡೆಸಿದಾಗ ಅದು ವಿಷದ ಬಾಟಲ್ ಎಂಬುದು ಬಹಿರಂಗವಾಯಿತು. ಪ್ರಾಥಮಿಕ ತನಿಖೆಯಲ್ಲಿ ಹೊರಗಿನವರ ಕೈವಾಡ ಇಲ್ಲ ಎಂದು ತಿಳಿದ ಕಾರಣ, ಪೊಲೀಸರು ವಿದ್ಯಾರ್ಥಿಗಳಿಂದಲೇ ಮಾಹಿತಿ ಸಂಗ್ರಹಿಸಲು ಶಿಕ್ಷಕರಿಗೆ ಸೂಚನೆ ನೀಡಿದರು.

ವಿಚಾರಣೆಯ ಸಂದರ್ಭದಲ್ಲಿ ಒಬ್ಬ ಬಾಲಕ ಟ್ಯಾಂಕ್‌ಗೆ ಜ್ಯೂಸ್ ಹಾಕಿದಿರುವುದಾಗಿ ಒಪ್ಪಿಕೊಂಡನು. ಆ ಬಾಟಲ್ ಅನ್ನು ನೀಡಿದ್ದವರು ಕೃಷ್ಣ ಮಾದರ್ ಎಂಬ ವ್ಯಕ್ತಿಯಾಗಿದ್ದು, ಈತನನ್ನು ವಿಚಾರಣೆ ನಡೆಸಿದಾಗ, ವಿಷಯದ ಹಿಂದೆ ಗಂಭೀರ ಸಂಚು ಹೊರಬಂದಿದೆ. ಕೃಷ್ಣ ನೀಡಿದ ಮಾಹಿತಿ ಆಧಾರವಾಗಿ ಸಾಗರ್ ಪಾಟೀಲ್ ಮತ್ತು ನಾಗನಗೌಡ ಪಾಟೀಲ್ ಎಂಬ ಇಬ್ಬರನ್ನು ಬಂಧಿಸಲಾಗಿದೆ.

ಸಾಗರ್ ಪಾಟೀಲ್ ಅವರು ಮುಸ್ಲಿಂ ಅಧ್ಯಾಪಕರೊಬ್ಬರನ್ನು ಗ್ರಾಮದಿಂದ ಹೊರಹಾಕುವ ಉದ್ದೇಶದಿಂದ ಈ ಪ್ಲಾನ್ ರೂಪಿಸಿದ್ದಾಗಿ ಪೊಲೀಸರಿಗೆ ಹೇಳಿದ್ದು, ಘಟನೆ ಹಿಂದಿನ ಧಾರ್ಮಿಕ ಗಂಭೀರತೆಯೇ ಇನ್ನು ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ. ಸದ್ಯದ ತನಿಖೆಯಲ್ಲಿ ಮೂರು ಆರೋಪಿಗಳು ಬಂಧಿತರಾಗಿದ್ದು, ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ. ಈ ಕೃತ್ಯಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Must Read

error: Content is protected !!