ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಇಡೀ ಉತ್ತರ ಭಾರತವನ್ನು ತೀವ್ರ ಚಳಿಯ ಅಲೆ ಆವರಿಸಿದ್ದು, ಸಾಮಾನ್ಯ ಜೀವನ ಅಸ್ತವ್ಯಸ್ತವಾಗಿದೆ. ಈ ಋತುವಿನಲ್ಲೇ ಅತಿ ಕಡಿಮೆ ತಾಪಮಾನವನ್ನು ದೆಹಲಿ ದಾಖಲಿಸಿದ್ದು, ಕನಿಷ್ಠ ತಾಪಮಾನ 3 ಡಿಗ್ರಿ ಸೆಲ್ಸಿಯಸ್ ಸುತ್ತಮುತ್ತ ಇಳಿದಿದೆ. ಐಎಂಡಿ ಪ್ರಕಾರ, ಮಂಗಳವಾರವೂ ಶೀತ ಅಲೆ ಹಾಗೂ ದಟ್ಟ ಮಂಜಿನ ಸ್ಥಿತಿ ಮುಂದುವರಿಯುವ ಸಾಧ್ಯತೆ ಇದೆ.
ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನದ ಹಲವಾರು ಬಯಲು ಪ್ರದೇಶಗಳಲ್ಲಿ ತಾಪಮಾನ ಶೂನ್ಯದ ಸಮೀಪಕ್ಕೆ ಇಳಿದಿದ್ದು, ಕೆಲವೆಡೆ ಶೂನ್ಯಕ್ಕಿಂತಲೂ ಕಡಿಮೆ ದಾಖಲಾಗಿದೆ. ಬಟಿಂಡಾ, ಅಮೃತಸರ, ಫರೀದ್‌ಕೋಟ್, ಗುರುಗ್ರಾಮ ಸೇರಿದಂತೆ ಹಲವು ನಗರಗಳಲ್ಲಿ ತೀವ್ರ ಚಳಿ ಅನುಭವಿಸಲಾಗುತ್ತಿದೆ. ಈ ಹಿನ್ನೆಲೆ ಪಂಜಾಬ್ ಮತ್ತು ಹರಿಯಾಣಕ್ಕೆ ರೆಡ್ ಅಲರ್ಟ್ ಘೋಷಿಸಲಾಗಿದೆ.
ಐಎಂಡಿ ಎಚ್ಚರಿಕೆಯಂತೆ, ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ಮಧ್ಯಪ್ರದೇಶದ ಭಾಗಗಳಲ್ಲಿ ದಟ್ಟ ಮಂಜು ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ರಸ್ತೆ, ರೈಲು ಮತ್ತು ವಿಮಾನ ಸಂಚಾರಕ್ಕೆ ಅಡಚಣೆ ಉಂಟಾಗಬಹುದು. ಜನವರಿ 12 ಮತ್ತು 13ರಂದು ರೆಡ್ ಅಲರ್ಟ್ ಜಾರಿಯಲ್ಲಿದ್ದು, ಬಳಿಕ ಜನವರಿ 17ರವರೆಗೆ ಹಳದಿ ಅಲರ್ಟ್ ಮುಂದುವರಿಯಲಿದೆ.
ಇನ್ನು ದಕ್ಷಿಣ ಭಾರತದಲ್ಲಿ ಹವಾಮಾನ ಮಿಶ್ರ ಸ್ವರೂಪದಲ್ಲಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳು, ಕೇರಳ, ತಮಿಳುನಾಡು, ಲಕ್ಷದ್ವೀಪ ಮತ್ತು ಪುದುಚೇರಿಯಲ್ಲಿ ಮಳೆಯ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸಂಜೆ ವೇಳೆಗೆ ಮಳೆ ಬೀಳುವ ನಿರೀಕ್ಷೆ ಇದೆ. ಆದರೆ ಆಂಧ್ರಪ್ರದೇಶ ಹಾಗೂ ತೆಲಂಗಾಣದ ಬಹುತೇಕ ಭಾಗಗಳಲ್ಲಿ ಒಣ ಹವಾಮಾನ ಮುಂದುವರಿಯಲಿದೆ.


