ಹೊಸದಿಗಂತ ದಾಂಡೇಲಿ:
ತಾಲೂಕಿನ ಹರೇಗಾಳಿ ಗ್ರಾಮದಲ್ಲಿ ಹುಲಿಗಳ ಹಿಂಡು ಭೀಕರ ದಾಳಿ ನಡೆಸಿದ್ದು, ಮೇಯಲು ಬಿಟ್ಟಿದ್ದ ಎರಡು ಎಮ್ಮೆಗಳನ್ನು ಸಾಯಿಸಿ, ಇನ್ನೆರಡು ಎಮ್ಮೆಗಳನ್ನು ತೀವ್ರವಾಗಿ ಗಾಯಗೊಳಿಸಿರುವ ಘಟನೆ ಸಂಭವಿಸಿದೆ.
ಅಂಬೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಸಕ್ಕುಬಾಯಿ ಸಗ್ಗು ಬೋಡಕೆ ಎಂಬುವವರಿಗೆ ಸೇರಿದ ಎಮ್ಮೆಗಳ ಮೇಲೆ ಈ ದಾಳಿ ನಡೆದಿದೆ. ಪ್ರತಿದಿನದಂತೆ ಮನೆ ಸಮೀಪದ ಕಾಡಿನೊಳಗೆ ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಏಕಾಏಕಿ ಎರಗಿದ ಹುಲಿಗಳು ಜಾನುವಾರುಗಳನ್ನು ಬಲಿ ಪಡೆದಿವೆ. ದಾಳಿಯ ತೀವ್ರತೆಗೆ ಎರಡು ಎಮ್ಮೆಗಳು ಸ್ಥಳದಲ್ಲೇ ಮೃತಪಟ್ಟರೆ, ಉಳಿದೆರಡು ಎಮ್ಮೆಗಳು ಗಂಭೀರವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿವೆ.
ಸಕ್ಕುಬಾಯಿ ಅವರು ಹೈನುಗಾರಿಕೆಯನ್ನೇ ತಮ್ಮ ಪ್ರಮುಖ ವೃತ್ತಿಯನ್ನಾಗಿಸಿಕೊಂಡಿದ್ದರು. ಎಮ್ಮೆಗಳಿಂದ ಬರುತ್ತಿದ್ದ ಆದಾಯವೇ ಅವರ ಜೀವನಕ್ಕೆ ಆಧಾರವಾಗಿತ್ತು. ಈಗ ಅನಾಹುತದಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದ್ದು, ಕುಟುಂಬದ ಜೀವನೋಪಾಯಕ್ಕೆ ಸಂಚಕಾರ ಬಂದಿದೆ.
ಕಾಡಂಚಿನ ಭಾಗದಲ್ಲಿ ಇಂತಹ ಘಟನೆಗಳು ಪದೇ ಪದೇ ಮರುಕಳಿಸುತ್ತಿದ್ದು, ರೈತರು ಮತ್ತು ಹೈನುಗಾರರು ಆತಂಕದಲ್ಲಿದ್ದಾರೆ. ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ನಷ್ಟ ಅನುಭವಿಸಿದ ಸಕ್ಕುಬಾಯಿ ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

