Saturday, December 27, 2025

ಇಂದೂರ- ನಂದಿಕಟ್ಟಾ ಭಾಗದಲ್ಲಿ ಹುಲಿ: ಸುಳ್ಳು ವದಂತಿ ನಂಬಬೇಡಿ ಎಂದ RFO

ಹೊಸದಿಗಂತ ವರದಿ ಮುಂಡಗೋಡ:

ಮುಂಡಗೋಡ ತಾಲೂಕಿನ ಇಂದೂರ- ನಂದಿಕಟ್ಟಾ ಭಾಗದಲ್ಲಿ ಹುಲಿ ಕಾಣಿಸಿಕೊಂಡ ಬಗ್ಗೆ ಸುಳ್ಳು ವದಂತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹಬ್ಬಿಸಿದ್ದು ಸಾರ್ವಜನಿಕರು ಯಾರೂ ಭಯ ಪಡುವ ಅಗತ್ಯವಿಲ್ಲ ಎಂದು ಇಲ್ಲಿನ ಆರ್.ಎಫ್.ಒ ಅಪ್ಪಾರಾವ್ ಕಲಶೆಟ್ಟಿ ತಿಳಿಸಿದ್ದಾರೆ.

ಅಡಿಕೆ ತೋಟದಲ್ಲಿ ಹಸುವೊಂದನ್ನು ಕೊಂದು ಹಾಕಿದ್ದು, ರಾತ್ರಿಯ ವೇಳೆ ಹುಲಿಯ ಸುಳಿದಾಟ, ಹುಲಿ ಮರ ಹತ್ತುವುದು, ಹಗಲಿನಲ್ಲಿಯೇ ಬೆಂಚ್ ಮೇಲೆ ಮಲಗಿರುವ ಫೋಟೋಗಳನ್ನು ವಾಟ್ಸ್ ಆಪ್ ಸ್ಟೇಟಸ್ ನಲ್ಲಿ ಹಾಕಿದ್ದನ್ನು ನೋಡಿ ಈಗಾಗಲೇ ಆ ಭಾಗದ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಮಾಹಿತಿ ತಿಳಿದು ಅರಣ್ಯ ಇಲಾಖೆಯ ಸಿಬ್ಬಂದಿ ಟಿಬೆಟಿಯನ್ ಕಾಲನಿ ಮತ್ತು ಅಕ್ಕಪಕ್ಕದ ಭಾಗದಲ್ಲಿ ಹೋಗಿ ಪರಿಶೀಲನೆ ಮಾಡಿ ಟಿಬೆಟಿಯನ್ನರಿಗೆ ಕೇಳಿದಾಗ ಅವರು ಇದು ಇಲ್ಲಿನ ಫೋಟೋ ಮತ್ತು ವೀಡಿಯೋ ಅಲ್ಲ ಬೈಲಕುಪ್ಪೆಯ ಹತ್ತಿರದ ಗ್ರಾಮದ ಫೋಟೋ ಎಂದು ಹೇಳಿದರು.

ಸಾಮಾಜಿಕ ಜಾಲತಾಣದಲ್ಲಿ ಫೋಟೋ ಮತ್ತು ವಿಡಿಯೋ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ತಹಶೀಲ್ದಾರ ಮತ್ತು ಸಿಪಿಐಗೆ ದೂರು ನೀಡಲಾಗುವುದು. ಯಾರೂ ಕೂಡಾ ಈ ಸುಳ್ಳು ಸುದ್ದಿಯನ್ನು ನಂಬಬಾರದು ಮತ್ತು ನಿರ್ಭೀತರಾಗಿ ಇರಬೇಕು ಎಂದು ಅವರು ಸಾರ್ವಜನಿಕರಲ್ಲಿ ಧೈರ್ಯ ತುಂಬಿದ್ದಾರೆ.

error: Content is protected !!