ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ವನ್ಯಧಾಮದಲ್ಲಿ ನಡೆದ ದೈತ್ಯ ಹುಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳಾದ ಹಸುವಿನ ಮಾಲೀಕ ಚಂದು ಮತ್ತು ಆತನ ಸಹಚರ ಅಭಿಷೇಕ್ ಎಂಬುವವರನ್ನು ಬಂಧಿಸಲಾಗಿದೆ.
ಈ ಗಂಭೀರ ಘಟನೆಯ ಹಿನ್ನೆಲೆಯಲ್ಲಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರು ಅವರು ಹನೂರಿಗೆ ಆಗಮಿಸಿದ್ದರು. ಈ ಹುಲಿ ಹತ್ಯೆ ಪ್ರಕರಣದ ಸಮಗ್ರ ತನಿಖಾ ವರದಿ ಸಲ್ಲಿಸಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಪಿಸಿಸಿಎಫ್ ಸ್ಮಿತಾ ಬಿಜ್ಜೂರು ನೇತೃತ್ವದಲ್ಲಿ ತನಿಖಾ ತಂಡವನ್ನೇ ನೇಮಿಸಿದ್ದರು.
ಪಶ್ಚಾತ್ತಾಪದ ಕಂಬನಿ:
ಹನೂರು ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಬಳಿ ನಡೆದ ವಿಚಾರಣೆ ವೇಳೆ, ತನಿಖಾಧಿಕಾರಿಗಳ ಮುಂದೆ ಆರೋಪಿಗಳ ಕುಟುಂಬಸ್ಥರು ಕಣ್ಣೀರಿಟ್ಟರು. ಬಹುತೇಕ ಬಂಧಿತರೆಲ್ಲರಿಗೂ 30 ವರ್ಷಕ್ಕಿಂತ ಕಡಿಮೆ ವಯಸ್ಸಾಗಿದೆ ಎಂಬುದನ್ನು ಗಮನಿಸಿದ ಅಧಿಕಾರಿಗಳು, ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
“ಇಂತಹ ಪ್ರಕರಣದಲ್ಲಿ ಭಾಗಿಯಾಗದಂತೆ ನೀವೆಲ್ಲ ಸೇರಿ ಬುದ್ಧಿ ಹೇಳಬೇಕಿತ್ತು. ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ,” ಎಂದು ಅಧಿಕಾರಿಗಳು ಕುಟುಂಬಸ್ಥರಿಗೆ ತಿಳಿಸಿದರು. ಈ ವೇಳೆ, ಆರೋಪಿಗಳ ಕುಟುಂಬ ಸದಸ್ಯರು ಕೈ ಮುಗಿದು, ಕ್ಷಮೆ ಯಾಚಿಸಿ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ಮನವಿ ಮಾಡಿಕೊಂಡರು.

