ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ಚಂದ್ರಾಪುರ- ಮುಲ್ ಹೆದ್ದಾರಿಯಲ್ಲಿ ಹುಲಿಯೊಂದು ಮಲಗಿ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು.ಇದರಿಂದ , ಚಂದ್ರಾಪುರದಿಂದ ಮುಲ್‌ಗೆ ಮತ್ತು ಮುಲ್‌ನಿಂದ ಚಂದ್ರಾಪುರಕ್ಕೆ ಹೋಗುವ ವಾಹನಗಳು ಎರಡೂ ಬದಿಗಳಲ್ಲಿ ಬ್ಲಾಕ್ ಆದ ಘಟನೆ ನಡೆದಿದೆ.
ಈ ಪ್ರದೇಶವು ತಡೋಬಾ-ಅಂಧಾರಿ ಹುಲಿ ಮೀಸಲು ಪ್ರದೇಶದ (ಟಿಎಟಿಆರ್) ಬಫರ್ ವಲಯಕ್ಕೆ ಹೊಂದಿಕೊಂಡಿರುವುದರಿಂದ, ವನ್ಯಜೀವಿಗಳು ಇಲ್ಲಿ ಯಾವಾಗಲೂ ಓಡಾಡುತ್ತಿರುತ್ತವೆ.
‘ಮಾಮಾ ಮೆಲ್’ ಎಂಬ ಈ ಹುಲಿ ತನ್ನ ದಿಟ್ಟ ಸ್ವಭಾವಕ್ಕೆ ಹೆಸರುವಾಸಿಯಾಗಿದೆ. ಎರಡೂ ಕಡೆಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದರೂ ಅವುಗಳ ಶಬ್ದ, ಜನರ ಗಲಾಟೆಯ ಬಗ್ಗೆ ತಲೆಕೆಡಿಸಿಕೊಳ್ಳದ ಈ ಹುಲಿ ತನ್ನಷ್ಟಕ್ಕೆ ತಾನು ಆರಾಮಾಗಿ ರಸ್ತೆಯ ಮಧ್ಯೆ ಮಲಗಿತ್ತು. ಈ ಹುಲಿ ಹೆದ್ದಾರಿಯ ಸಮೀಪದಲ್ಲಿ ಎರಡು ಎತ್ತುಗಳನ್ನು ಬೇಟೆಯಾಡಿತ್ತು. ಬೇಟೆಯಾಡಿದ ನಂತರ ಆ ಪ್ರದೇಶದಲ್ಲಿ ಸುತ್ತಾಡುತ್ತಿತ್ತು. ಬಳಿಕ ಹೆದ್ದಾರಿಯ ಮಧ್ಯದಲ್ಲಿ ವಿಶ್ರಾಂತಿ ಪಡೆಯಲು ಕುಳಿತಿತು.
ಇದರಿಂದ ಚಂದ್ರಾಪುರದಿಂದ ಮುಲ್‌ಗೆ ಮತ್ತು ಮುಲ್‌ನಿಂದ ಚಂದ್ರಾಪುರಕ್ಕೆ ಹೋಗುವ ವಾಹನಗಳು ಎರಡೂ ಬದಿಗಳಲ್ಲಿ ನಿಂತವು.ಸುಮಾರು ಅರ್ಧ ಗಂಟೆಗಳ ಕಾಲ ಸಂಚಾರವನ್ನು ನಿಲ್ಲಿಸಬೇಕಾಯಿತು.
ಅರಣ್ಯ ಅಧಿಕಾರಿಗಳು ವಾಹನಗಳು ಮತ್ತು ಹುಲಿಯ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಂಡು, ರಸ್ತೆಯಲ್ಲಿ ಅನಗತ್ಯ ಜನಸಂದಣಿ ಇರದಂತೆ ನೋಡಿಕೊಂಡರು. ಹುಲಿಯನ್ನು ಓಡಿಸುವ ಬದಲು, ಅದು ತಾನಾಗಿಯೇ ಕಾಡಿಗೆ ಹೋಗುತ್ತದೆಯೇ ಎಂದು ಕಾದು ಕುಳಿತರು. ಸುಮಾರು ಅರ್ಧ ಗಂಟೆ ಸದ್ದಿಲ್ಲದೆ ಕುಳಿತ ನಂತರ ಆ ಹುಲಿ ರಸ್ತೆಯಿಂದ ಎದ್ದು ತನ್ನಷ್ಟಕ್ಕೆ ತಾನೇ ಕಾಡಿನ ಕಡೆಗೆ ನಡೆಯಿತು.

