January21, 2026
Wednesday, January 21, 2026
spot_img

ಪುತ್ತೂರು ಎಸಿ ನ್ಯಾಯಾಲಯಕ್ಕೆ ತಿಮರೋಡಿ: ಶ್ರೀ ಮಹಾಲಿಂಗೇಶ್ವರಗೆ ತುಪ್ಪ ದೀಪ, ಎಳ್ಳೆಣ್ಣೆ ಸಮರ್ಪಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿರುವ ಆದೇಶಕ್ಕೆ ಸಂಬಂಧಿಸಿ ಇಂದು ಸೌಜನ್ಯ ಪರ ಹೋರಟಗಾರ ಮಹೇಶ್ ಶೆಟ್ಟಿ ತಿಮರೋಡಿ ಪುತ್ತೂರು ಎಸಿ ಕೋರ್ಟ್‌ಗೆ ಹಾಜರಾಗಿದ್ದಾರೆ. ಇದಕ್ಕೂ ಮುನ್ನ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ ಅವರು ಅಲ್ಲಿ ತುಪ್ಪ ದೀಪ, ಎಳ್ಳೆಣ್ಣೆ ಸಮರ್ಪಣೆ ಮಾಡಿ ಪ್ರಾರ್ಥನೆ ಮಾಡಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ ಜಾರಿಗೊಳಿಸಲು ಸಿದ್ಧತೆ ಮಾಡಿದ್ದ ಗಡಿಪಾರು ಆದೇಶಕ್ಕೆ ಸಂಬಂಧಿಸಿದ ವಿಚಾರಣೆ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತರ ಕಚೇರಿಯಲ್ಲಿ ಮುಕ್ತಾಯಗೊಂಡಿದ್ದು, ಡಿ.11ರೊಳಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗಿದೆ ಎಂದು ತಿಮರೋಡಿ ಪರ ವಕೀಲ ವಿಜಯವಾಸು ಮಾಹಿತಿ ನೀಡಿದ್ದಾರೆ.

ತಿಮರೋಡಿ ಪರ ವಕೀಲರು ಮಾಧ್ಯಮಗಳೊಂದಿಗೆ ಮಾಹಿತಿ ನೀಡಿ, ವಿಚಾರಣೆಯ ವೇಳೆ ಸುಪ್ರೀಂ ಕೋರ್ಟ್ ಹಾಗೂ ಇತರ ನ್ಯಾಯಾಲಯಗಳ ತೀರ್ಪುಗಳ ದಾಖಲೆಗಳನ್ನು ಸಹಾಯಕ ಆಯುಕ್ತರಿಗೆ ಸಲ್ಲಿಸಲಾಗಿದೆ. ತಿಮರೋಡಿ ಅವರ ಭಾಷಣಗಳಿಂದ ಇದುವರೆಗೆ ಯಾವುದೇ ಅಹಿತಕರ ಘಟನೆ, ಕೋಮು ಉದ್ರಿಕ್ತತೆ ಅಥವಾ ಅಶಾಂತಿ ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಹಿಂದಿನ ಗಡಿಪಾರು ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದ್ದು, ಆ ಸಂದರ್ಭದಲ್ಲಿ ತಿಮರೋಡಿ ವಿರುದ್ಧ ಸೆಕ್ಷನ್ 55 ಎ ಅಥವಾ 55 ಬಿ ಅಡಿಯಲ್ಲಿ ಆದೇಶ ನೀಡಲಾಗಿದೆಯೋ ಎಂದು ಕೋರ್ಟ್ ಸಹಾಯಕ ಆಯುಕ್ತರಿಂದ ಸ್ಪಷ್ಟನೆ ಕೇಳಿತ್ತು. ಹೈಕೋರ್ಟ್ ಡಿ. 15ರೊಳಗೆ ವಿವರವಾದ ವರದಿ ಸಲ್ಲಿಸಲು ಸೂಚಿಸಿ, ಅಷ್ಟರವರೆಗೆ ಗಡಿಪಾರು ಆದೇಶಕ್ಕೆ ತಡೆ ನೀಡಿತ್ತು ಎಂದು ವಕೀಲ ವಿಜಯವಾಸು ಹೇಳಿದರು.

Must Read