Saturday, December 6, 2025

ಟೈಂ ಈಸ್ ಮನಿ: ಮೆಟ್ರೋ ವಿಳಂಬಕ್ಕೆ ಡಿಕೆಶಿ ಗರಂ.. ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಳಗಾವಿಯಲ್ಲಿ ಸೋಮವಾರದಿಂದ ಅಧಿವೇಶನ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನಲ್ಲಿ ಬಾಕಿ ಇರುವ ಪ್ರಮುಖ ಕಾಮಗಾರಿಗಳಿಗೆ ವೇಗ ನೀಡಲು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ, ಶುಕ್ರವಾರದಂದು ಮೆಟ್ರೋ ನೀಲಿ ಮಾರ್ಗದ ಕಾಮಗಾರಿಗಳ ಸ್ಥಳ ಪರಿಶೀಲನೆ ನಡೆಸಿದ ಡಿಸಿಎಂ, ಕಾಮಗಾರಿಯಲ್ಲಿ ವಿಳಂಬವಾಗಿದ್ದಕ್ಕೆ ಗುತ್ತಿಗೆದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊಡಿಗೆಹಳ್ಳಿ ಪ್ರದೇಶದಲ್ಲಿ ಮೆಟ್ರೋ ಕಾಮಗಾರಿಯನ್ನು ಪರಿಶೀಲಿಸಿದ ಡಿಕೆ ಶಿವಕುಮಾರ್ ಅವರು ವಿಳಂಬದ ಬಗ್ಗೆ ಕೋಪಗೊಂಡರು. ಸ್ಥಳದಲ್ಲಿದ್ದ ನಾಗಾರ್ಜುನ್ ಕನ್ಸ್ಟ್ರಕ್ಷನ್‌ನ ಪ್ರತಿನಿಧಿ ಪ್ರೇಮ್ ರೆಡ್ಡಿ ಅವರಿಗೆ ಗಂಭೀರ ಎಚ್ಚರಿಕೆ ನೀಡಿದ ಡಿಸಿಎಂ, “ಟೈಂ ಈಸ್ ಮನಿ, ಟೈಂ ಈಸ್ ವ್ಯಾಲ್ಯೂ! ನಿಗದಿತ ಅವಧಿಯೊಳಗೆ ಕೆಲಸವನ್ನು ಪೂರ್ಣಗೊಳಿಸಿದರೆ ಮಾತ್ರ ಮುಂದಿನ ಕಾಮಗಾರಿಯನ್ನು ನೀಡುತ್ತೇವೆ,” ಎಂದು ಸ್ಪಷ್ಟಪಡಿಸಿದ್ದಾರೆ.

ಅಲ್ಲದೆ, ಲಾಂಚಿಂಗ್ ಗರ್ಡರ್ ಯಂತ್ರವನ್ನು ನಗರದಿಂದ ಹೊರಕ್ಕೆ ಕೊಂಡೊಯ್ಯುವುದಕ್ಕೆ ಅವಕಾಶ ನೀಡುವುದಿಲ್ಲ ಎಂದು ಗುತ್ತಿಗೆದಾರರಿಗೆ ಖಡಕ್ ಸೂಚನೆ ನೀಡಿದ್ದಾರೆ.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ನೀಲಿ ಮಾರ್ಗದ ಪ್ರಗತಿ ಮತ್ತು ಗುರಿಗಳ ಬಗ್ಗೆ ಮಾಹಿತಿ ನೀಡಿದರು. ಕೆ.ಆರ್. ಪುರಂ – ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವಿನ ಮೆಟ್ರೋ ಸಂಚಾರವನ್ನು ಡಿಸೆಂಬರ್ 2026 ರೊಳಗೆ ಆರಂಭಿಸುವ ಗುರಿ ಹೊಂದಲಾಗಿದೆ. ಹೆಬ್ಬಾಳ – ಏರ್‌ಪೋರ್ಟ್‌ ಮಾರ್ಗವನ್ನು ಜೂನ್ 2027 ರೊಳಗೆ ಆರಂಭಿಸಲು ಸರ್ಕಾರ ನಿರ್ಧರಿಸಿದೆ.

ಒಟ್ಟು 58 ಕಿ.ಮೀ ಉದ್ದದ ಈ ಮಾರ್ಗಕ್ಕೆ ರೂ. 15,000 ಕೋಟಿ ವೆಚ್ಚ ಅಂದಾಜಿಸಲಾಗಿದೆ. 30 ಮೆಟ್ರೋ ನಿಲ್ದಾಣಗಳ ಪೈಕಿ 5 ರಿಂದ 10 ಸ್ಟೇಷನ್ ಬ್ಲಾಕ್‌ಗಳು ಪೂರ್ಣಗೊಳ್ಳುತ್ತಿದ್ದಂತೆಯೇ, ಆಯ್ದ ಮಾರ್ಗಗಳಲ್ಲಿ ಸಂಚಾರವನ್ನು ಭಾಗಶಃ ಆರಂಭಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಮೆಟ್ರೋ ಕಾಮಗಾರಿಗಳ ಜೊತೆಗೆ, ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಸಂಬಂಧಿಸಿದ ಭೂ ಪರಿಹಾರದ ಕುರಿತೂ ಡಿಸಿಎಂ ಮಾತನಾಡಿದರು.

ಯೋಜನೆಗೆ ಭೂಮಿ ನೀಡಲು ಒಪ್ಪಿಕೊಂಡ ರೈತರಿಗೆ ನೀಡಿದ ಮಾತಿನಂತೆ ಪರಿಹಾರವನ್ನು ನೀಡಲಾಗುವುದು. ಆದರೆ, ಒಪ್ಪದ ರೈತರಿಗೆ ಹಳೆಯ ದರದಲ್ಲಿ ಪರಿಹಾರದ ಮೊತ್ತವನ್ನು ಡೆಪಾಸಿಟ್ ಮಾಡಲು ಸೂಚಿಸಲಾಗಿದೆ. “ರಸ್ತೆ ನಿರ್ಮಾಣ ಕಾರ್ಯ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ,” ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ. ರೈತರಿಗೆ ಐದು ಆಯ್ಕೆಗಳನ್ನು ನೀಡಲಾಗಿದ್ದು, ಇದರಲ್ಲಿ 35% ವಾಣಿಜ್ಯ ಭೂಮಿ ನೀಡುವ ಆಯ್ಕೆಯೂ ಸೇರಿದೆ. ರೈತರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದ್ದಾರೆ.

error: Content is protected !!