ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿತ್ರದುರ್ಗದಲ್ಲಿ ನಡೆದ ಭೀಕರ ಅಪಘಾತದ ಆಘಾತ ಮಾಸುವ ಮುನ್ನವೇ, ಚಿಕ್ಕಬಳ್ಳಾಪುರ ತಾಲೂಕಿನ ಅಜ್ಜವಾರ ಗೇಟ್ ಬಳಿ ನಡೆದ ಮತ್ತೊಂದು ರಸ್ತೆ ದುರಂತ ನಾಲ್ವರು ಯುವಕರ ಬಲಿ ಪಡೆದಿದೆ.
ಘಟನೆಯ ವಿವರ:
ಅಜ್ಜವಾರ ಗ್ರಾಮದ ನಿವಾಸಿಗಳಾದ ಮನೋಜ್, ನಂದೀಶ್ ಹಾಗೂ ಅಣ್ಣ-ತಮ್ಮಂದಿರಾದ ನರಸಿಂಹಮೂರ್ತಿ ಮತ್ತು ಅರುಣ್ ಎಂಬುವವರು ಒಂದೇ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದರು. ಅಜ್ಜವಾರ ಕ್ರಾಸ್ ಬಳಿ ಬೈಕ್ ತಿರುವು ಪಡೆಯುತ್ತಿದ್ದ ಸಂದರ್ಭದಲ್ಲಿ ಅತಿ ವೇಗವಾಗಿ ಬಂದ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ನಾಲ್ವರೂ ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರಲ್ಲಿ ನರಸಿಂಹಮೂರ್ತಿ ಎಂಬ ಯುವಕ ಕೇವಲ ಆರು ತಿಂಗಳ ಹಿಂದೆಯಷ್ಟೇ ಪ್ರೀತಿಸಿ ಮದುವೆಯಾಗಿದ್ದ. ಅಣ್ಣ-ತಮ್ಮಂದಿರ ಸಾವಿನಿಂದ ಇಡೀ ಕುಟುಂಬ ಅನಾಥವಾಗಿದೆ.
ಘಟನಾ ಸ್ಥಳಕ್ಕೆ ಚಿಕ್ಕಬಳ್ಳಾಪುರ ಎಸ್ಪಿ ಕುಶಲ್ ಚೌಕ್ಸೆ ಮತ್ತು ಗ್ರಾಮಾಂತರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅತೀ ವೇಗ ಮತ್ತು ಒಂದೇ ಬೈಕ್‌ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

