ಕೆಆರ್‌ಎಸ್ ಅಣೆಕಟ್ಟೆಗೆ ಅಡಿಗಲ್ಲು ಹಾಕಿದ್ದು ಟಿಪ್ಪು: ಸಚಿವ ಮಹದೇವಪ್ಪ ಹೇಳಿಕೆಗೆ ಸಂಸದ ಯದುವೀರ್ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಆರ್‌ಎಸ್ ಅಣೆಕಟ್ಟೆಗೆ ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ್ ಎಂದು ಸಚಿವ ಹೆಚ್‌ಸಿ ಮಹದೇವಪ್ಪ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಇದು ಹಾಸ್ಯಾಸ್ಪದ ಹೇಳಿಕೆ. ಇತಿಹಾಸವನ್ನು ತಿದ್ದುಪಡಿ ಮಾಡುವ ಪ್ರಯತ್ನದ ಭಾಗವಿದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಟಿಪ್ಪು ಸುಲ್ತಾನ್ ಕೆಆರ್‌ಎಸ್‌ಗೆ ಅಡಿಗಲ್ಲು ಹಾಕಿದರೆಂಬ ಯಾವುದೇ ಸಾಕ್ಷಿ ಇಲ್ಲ. ಕೆಆರ್‌ಎಸ್ ಕಟ್ಟಿದವರು ಯಾರು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಶಿಕ್ಷಕರು, ಇತಿಹಾಸ ತಜ್ಞರು ಈ ಬಗ್ಗೆ ನಿಖರವಾದ ಮಾಹಿತಿ ನೀಡುತ್ತಾರೆ. ಈ ರೀತಿ ಯಾವುದೇ ಕಥೆಯನ್ನು ನಾನು ಈವರೆಗೆ ಕೇಳಿಲ್ಲ ಎಂದು ಯದುವೀರ್ ಹೇಳಿದರು.

ಟಿಪ್ಪು ಕಾಲದಲ್ಲಿ ನಾಲ್ಕು ದೊಡ್ಡ ಯುದ್ಧಗಳು ನಡೆದವು. ಅಲ್ಲದೆ, ದೇವಾಲಯಗಳನ್ನು ಹಾನಿಗೊಳಿಸಲಾಗಿದೆ. ಆ ಕಾಲದಲ್ಲಿ ಶ್ರೀರಂಗನಾಥ ಮತ್ತು ನಂಜನಗೂಡಿನ ದೇವಾಲಯಗಳಲ್ಲಿ ಮಾತ್ರ ಪೂಜೆ ನಡೆಯುತ್ತಿತ್ತು. ಇದು ಸ್ಪಷ್ಟವಾದ ಇತಿಹಾಸ. ಈ ರೀತಿಯ ಹೇಳಿಕೆಗಳು ಮತದಾರರ ಓಲೈಸುವ ಅನುಕೂಲಕ್ಕಾಗಿ ನೀಡಲಾಗುತ್ತಿದೆ. ಇತಿಹಾಸವನ್ನು ತಿರುವುಗೊಳಿಸಿ ಮತ ಗಳಿಕೆಗೆ ಉಪಯೋಗಿಸುವುದು ಸರಿಯಲ್ಲ ಎಂದು ಒಡೆಯರ್ ಅವರು ಹೇಳಿದ್ದಾರೆ.

ಟಿಪ್ಪು ಕಾಲದಲ್ಲಿ ರೇಷ್ಮೆ ಕೈಗಾರಿಕೆಗೆ ಪ್ರಯೋಜನಕಾರಿಯಾದ ಕೆಲಸಗಳನ್ನು ಮಾಡಿರಬಹುದು. ಆದರೆ, ಒಂದು ಒಳ್ಳೆಯ ಕೆಲಸದಿಂದ ನೂರು ತಪ್ಪುಗಳನ್ನು ಮುಚ್ಚಲಾಗದು. ಗರ್ಭಿಣಿಯರು, ಅಯ್ಯಂಗಾರ್ ಸಮುದಾಯದವರು ಸೇರಿದಂತೆ ಅನೇಕ ನಿರಪರಾಧಿಗಳು ಟಿಪ್ಪು ಕಾಲದಲ್ಲಿ ಕೊಲೆಯಾದರು. ಇವುಗಳನ್ನು ಮರೆತುಬಿಡುವಂತಿಲ್ಲ ಎಂದು ಯದುವೀರ್ ಹೇಳಿದ್ದಾರೆ.

ರಾಜಕೀಯ ನಾಯಕರು ಇತಿಹಾಸವನ್ನು ಆಧಾರರಹಿತವಾಗಿ ಪ್ರಸ್ತಾಪಿಸುವುದು ತಪ್ಪು. ತಮ್ಮ ರಾಜಕೀಯಕ್ಕೆ ಇದನ್ನ ಬಳಸಬಾರದು. ಇತಿಹಾಸವನ್ನು ಪ್ರಸ್ತುತಪಡಿಸಲು ಸಾಕ್ಷ್ಯಾಧಾರಗಳು ಅಗತ್ಯ. ಸಾಕ್ಷಿಗಳನ್ನ ತೋರಿಸಿ ಇತಿಹಾಸವನ್ನ ಮಂಡಿಸಬೇಕು. ರಾಜಕಾರಣದ ಲಾಭಕ್ಕಾಗಿ ಇತಿಹಾಸವನ್ನು ದುರುಪಯೋಗಪಡಿಸಿಕೊಳ್ಳಬಾರದು ಎಂದು ಖಾರವಾಗಿ ಯದುವೀರ್ ತಿರುಗೇಟು ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!