ಪ್ರತಿ ವರ್ಷ ಸೆಪ್ಟೆಂಬರ್ 8 ರಂದು ಜಗತ್ತಿನಾದ್ಯಂತ ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಆಚರಿಸಲಾಗುತ್ತೆ. ಸಾಕ್ಷರತೆ ಎಂದರೆ ಕೇವಲ ಓದು-ಬರಹ ತಿಳಿದಿರೋದಲ್ಲ, ಬದಲಾಗಿ ಜ್ಞಾನ, ಅರಿವು ಮತ್ತು ಸಮಾಜದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಸಾಮರ್ಥ್ಯವನ್ನು ನೀಡುವ ಶಕ್ತಿಯಾಗಿ ಪ್ರತಿಬಿಂಬಿತವಾಗಿದೆ. ಯುನೆಸ್ಕೋ 1966ರಲ್ಲಿ ಸಾಕ್ಷರತಾ ದಿನವನ್ನು ಘೋಷಿಸಿದ ಬಳಿಕ, ಇಂದಿಗೆ ಇದು ಜಾಗತಿಕ ಮಟ್ಟದಲ್ಲಿ ಶಿಕ್ಷಣದ ಅಗತ್ಯತೆ ಹಾಗೂ ಮಹತ್ವವನ್ನು ಜನರಿಗೆ ತಲುಪಿಸುವ ಪ್ರಮುಖ ವೇದಿಕೆಯಾಗಿದೆ.
ಇಂದಿನ ದಿನದಲ್ಲಿ ಸಾಕ್ಷರತೆಯ ಅಭಾವವು ಅನೇಕ ದೇಶಗಳಲ್ಲಿ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೆ ಅಡ್ಡಿ ಉಂಟುಮಾಡುತ್ತಿದೆ. ಸಾಕ್ಷರತೆ ವ್ಯಕ್ತಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದಷ್ಟೇ ಅಲ್ಲದೆ, ಆತ್ಮವಿಶ್ವಾಸ, ತಾರತಮ್ಯವಿಲ್ಲದ ಬದುಕು ಮತ್ತು ಸಾಂಸ್ಕೃತಿಕ ಜಾಗೃತಿಯನ್ನು ನೀಡುತ್ತದೆ. ವಿಶೇಷವಾಗಿ ಮಹಿಳೆಯರ ಸಾಕ್ಷರತೆ ಸಮಾಜದ ಪ್ರಗತಿಯಲ್ಲಿ ಮಹತ್ವದ ಪಾತ್ರವಹಿಸುತ್ತದೆ.

2025ರ ಅಂತಾರಾಷ್ಟ್ರೀಯ ಸಾಕ್ಷರತಾ ದಿನದ ಥೀಮ್ “‘Promoting Literacy in the Digital Era” ಆಗಿದ್ದು, ಶಿಕ್ಷಣದ ಸ್ಥಳಗಳನ್ನು ಹೆಚ್ಚು ಪ್ರಾಯೋಗಿಕ, ಒಳಗೊಂಡಿರುವ ಮತ್ತು ತಂತ್ರಜ್ಞಾನಾಧಾರಿತವಾಗಿಸಲು ಒತ್ತಾಯಿಸುತ್ತದೆ. ಡಿಜಿಟಲ್ ಯುಗದಲ್ಲಿ ಸಾಕ್ಷರತೆ ಅಂದರೆ ಕೇವಲ ಪಠ್ಯ ಪುಸ್ತಕಗಳನ್ನು ಓದುವ ಸಾಮರ್ಥ್ಯವಲ್ಲ, ಬದಲಾಗಿ ತಂತ್ರಜ್ಞಾನವನ್ನು ಬಳಕೆ ಮಾಡುವ ಕೌಶಲ್ಯವೂ ಆಗಿದೆ.
ವಿಶ್ವ ಸಾಕ್ಷರತಾ ದಿನದ ಇತಿಹಾಸವು ಯುನೆಸ್ಕೋ ಮೂಲಕ 1966ರಲ್ಲಿ ಪ್ರಾರಂಭವಾಯಿತು. ಅಕ್ಟೋಬರ್ 26ರಂದು ನಡೆದ ಸಾಮಾನ್ಯ ಸಮ್ಮೇಳನದಲ್ಲಿ ಸೆಪ್ಟೆಂಬರ್ 8ನ್ನು ಸಾಕ್ಷರತಾ ದಿನವೆಂದು ಘೋಷಿಸಲಾಯಿತು ಮತ್ತು 1967ರಲ್ಲಿ ಮೊದಲ ಬಾರಿಗೆ ಅದನ್ನು ಆಚರಿಸಲಾಯಿತು. ಇಂದಿಗೂ ಯುನೆಸ್ಕೋ ಸಾಕ್ಷರತಾ ಮಟ್ಟವನ್ನು ಹೆಚ್ಚಿಸಲು ಅನೇಕ ರಾಷ್ಟ್ರಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ. ವಿಶೇಷವಾಗಿ ಆಫ್ರಿಕಾದ ಅನೇಕ ದೇಶಗಳಲ್ಲಿ ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಗ್ಲೋಬಲ್ ಅಲೈಯನ್ಸ್ ಫಾರ್ ಲಿಟರಸಿ ಎಂಬ ಜಾಲದ ಮೂಲಕ ಸಾಕ್ಷರತೆ ಹೆಚ್ಚಿಸಲು ಹೆಚ್ಚಿನ ಗಮನ ನೀಡುತ್ತಿದೆ.