ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಅಯೋಧ್ಯೆಯ ರಾಮಮಂದಿರದ ಮೇಲೆ ಕೇಸರಿ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಐದು ವರ್ಷದ ಬಳಿಕ ಅಯೋಧ್ಯೆ ರಾಮಮಂದಿರ ನಿರ್ಮಾಣ ಪೂರ್ಣಗೊಂಡಿದೆ. ಇದರ ಸಂಕೇತವಾಗಿ ಇಂದು ಅಯೋಧ್ಯೆಗೆ ಪ್ರಧಾನಿ ಮೋದಿ ಭೇಟಿ ನೀಡಿ, ರಾಮಮಂದಿರ ಗೋಪುರ ಮೇಲೆ 22 ಅಡಿ ಎತ್ತರದ ಭಗವಾ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಪ್ರಧಾನಿ ಮೋದಿ ಅವರು 22 ಅಡಿ ಎತ್ತರದ ಧಾರ್ಮಿಕ ಧ್ವಜಾರೋಹಣ ಮಾಡಿ, ಸಾಧುಗಳು, ಗಣ್ಯರು ಮತ್ತು ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಿದ್ದಾರೆ.ತ್ರಿಕೋನ ಕೇಸರಿ ಧ್ವಜವು ಸೂರ್ಯನ ಸಂಕೇತವನ್ನು ಹೊಂದಿದೆ. ಇದು ಶಾಶ್ವತ ಶಕ್ತಿ, ದೈವಿಕ ತೇಜಸ್ಸು, ಸದ್ಗುಣ ಮತ್ತು ಜ್ಞಾನೋದಯ ಮತ್ತು ಭಗವಾನ್ ರಾಮನಿಗೆ ಸಂಬಂಧಿಸಿದ ಎಲ್ಲಾ ಗುಣಗಳನ್ನು ಪ್ರತಿನಿಧಿಸುತ್ತದೆ.
ಓಂ ಚಿಹ್ನೆಯನ್ನು ಸಹ ಧ್ವಜ ಒಳಗೊಂಡಿದೆ. ಧ್ವಜವನ್ನು ಸಾಂಪ್ರದಾಯಿಕ ಉತ್ತರ ಭಾರತದ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ‘ಶಿಖರ’ದ ಮೇಲೆ ಇರಿಸಲಾಗುವುದು. ಈ ಕಾರ್ಯಕ್ರಮವು ರಾಮ ಮತ್ತು ಸೀತೆಯ ವಿವಾಹ ಪಂಚಮಿಯ ಮುಹೂರ್ತಕ್ಕೆ ಹೊಂದಿಕೆಯಾಗುವ ದಿನದಂದು ನಡೆಯಲಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಈ ದಿನಾಂಕವು 17 ನೇ ಶತಮಾನದಲ್ಲಿ ಅಯೋಧ್ಯೆಯಲ್ಲಿ 48 ಗಂಟೆಗಳ ಕಾಲ ನಿರಂತರ ಧ್ಯಾನ ಮಾಡಿದ್ದ ಒಂಬತ್ತನೇ ಸಿಖ್ ಗುರು ಗುರು ತೇಜ್ ಬಹದ್ದೂರ್ ಅವರ ಹುತಾತ್ಮ ದಿನವನ್ನು ಸಹ ಸೂಚಿಸುತ್ತದೆ’ ಎಂದು ಪ್ರಧಾನಿ ಮೋದಿ ಅವರ ಕಚೇರಿಯ ಹೇಳಿಕೆ ತಿಳಿಸಿದೆ.

