ಹೊಸದಿಗಂತ ಡಿಜಿಟಲ್ ಡೆಸ್ಕ್:
ಉದ್ಯಾನ ನಗರಿ ಬೆಂಗಳೂರು ಕೇವಲ ಐಟಿ ಹಬ್ ಮಾತ್ರವಲ್ಲ, ಇದು ರುಚಿಕರವಾದ ಖಾದ್ಯಗಳ ತವರೂರು ಕೂಡ ಹೌದು. ಇಲ್ಲಿನ ಮಸಾಲೆ ದೋಸೆಯ ಘಮಕ್ಕೆ ಮರುಳಾಗದವರಿಲ್ಲ. ಇದೀಗ ಟಾಲಿವುಡ್ನ ಖ್ಯಾತ ನಟ ದಗ್ಗುಬಾಟಿ ವೆಂಕಟೇಶ್ ಅವರು ಬೆಂಗಳೂರಿನ ಐತಿಹಾಸಿಕ ‘ವಿದ್ಯಾರ್ಥಿ ಭವನ’ಕ್ಕೆ ಭೇಟಿ ನೀಡಿ, ಇಲ್ಲಿನ ಸಂಪ್ರದಾಯಬದ್ಧ ರುಚಿಯನ್ನು ಸವಿದಿದ್ದಾರೆ.
ಗಾಂಧಿ ಬಜಾರ್ನ ಶತಮಾನದ ಇತಿಹಾಸವಿರುವ ವಿದ್ಯಾರ್ಥಿ ಭವನಕ್ಕೆ ಭೇಟಿ ನೀಡಿದ ವೆಂಕಟೇಶ್, ಮೊದಲು ಮೃದುವಾದ ಇಡ್ಲಿ ಮತ್ತು ಗರಿಗರಿಯಾದ ವಡೆಯನ್ನು ಸವಿಯುವ ಮೂಲಕ ತಮ್ಮ ದಿನವನ್ನು ಆರಂಭಿಸಿದರು. ನಂತರ ಇಲ್ಲಿನ ಫೇಮಸ್ ಚೌ-ಚೌ ಬಾತ್ ಸವಿದ ನಟ, ಅಂತಿಮವಾಗಿ ವಿದ್ಯಾರ್ಥಿ ಭವನದ ಸಿಗ್ನೇಚರ್ ಡಿಶ್ ಆದ ‘ಮಸಾಲೆ ದೋಸೆ’ಯ ರುಚಿಗೆ ಫಿದಾ ಆದರು. ದೋಸೆಯ ಬಳಿಕ ಬಿಸಿಬಿಸಿ ಫಿಲ್ಟರ್ ಕಾಫಿಯೊಂದಿಗೆ ತಮ್ಮ ಉಪಹಾರವನ್ನು ಮುಕ್ತಾಯಗೊಳಿಸಿದರು.
ಕೇವಲ ರುಚಿಯನ್ನು ಸವಿಯುವುದಷ್ಟೇ ಅಲ್ಲದೆ, ಹೋಟೆಲ್ ಮಾಲೀಕರು ಹಾಗೂ ಸಿಬ್ಬಂದಿಯೊಂದಿಗೆ ವೆಂಕಟೇಶ್ ಬಹಳ ಆತ್ಮೀಯವಾಗಿ ಮಾತನಾಡಿದರು. ಅವರ ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡು ಸಂಭ್ರಮಿಸಿದರು. ಒಬ್ಬ ದೊಡ್ಡ ಸ್ಟಾರ್ ನಟ ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಸಾಧಾರಣ ಗ್ರಾಹಕರಂತೆ ಬಂದು ದೋಸೆ ಸವಿದಿದ್ದು ನೆರೆದಿದ್ದವರ ಗಮನ ಸೆಳೆಯಿತು.
ವೆಂಕಟೇಶ್ ಅವರಿಗೆ ಕರ್ನಾಟಕ ಮತ್ತು ಕನ್ನಡದೊಂದಿಗೆ ಅವಿನಾಭಾವ ಸಂಬಂಧವಿದೆ. ತಮ್ಮ ಹಿಂದಿನ ಸಿನಿಮಾ ‘ಮನ ಶಂಕರ ವರ ಪ್ರಸಾದ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಕನ್ನಡಿಗನ ಪಾತ್ರದಲ್ಲಿ ಮಿಂಚಿದ್ದಾರೆ. ಸಿನಿಮಾಗಳಲ್ಲಿ ಕನ್ನಡ ಸಂಭಾಷಣೆಗಳನ್ನು ಹೇಳುವ ಮೂಲಕ ಈಗಾಗಲೇ ಕನ್ನಡಿಗರ ಮನೆಮಾತಾಗಿರುವ ಅವರು, ಇದೀಗ ಬೆಂಗಳೂರಿನ ದೋಸೆಯನ್ನೂ ಮೆಚ್ಚುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.



