Saturday, December 20, 2025

ತೋಷಖಾನಾ ಭ್ರಷ್ಟಾಚಾರ ಪ್ರಕರಣ: ಇಮ್ರಾನ್ ಖಾನ್, ಪತ್ನಿ ಬುಶ್ರಾ ಬೀಬಿಗೆ 17 ವರ್ಷ ಜೈಲು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದ ರಾಜಕೀಯ ವಲಯದಲ್ಲಿ ಮತ್ತೊಂದು ಮಹತ್ವದ ತೀರ್ಪು ಪ್ರಕಟವಾಗಿದ್ದು, ತೋಷಖಾನಾ ಭ್ರಷ್ಟಾಚಾರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿಗೆ 17 ವರ್ಷಗಳ ಜೈಲು ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯ ಆದೇಶ ನೀಡಿದೆ.

ಪಾಕಿಸ್ತಾನ ದಂಡ ಸಂಹಿತೆಯ ಸೆಕ್ಷನ್ 409 ಅಡಿಯಲ್ಲಿ ಕ್ರಿಮಿನಲ್ ನಂಬಿಕೆ ಉಲ್ಲಂಘನೆ ಆರೋಪಕ್ಕೆ 10 ವರ್ಷಗಳ ಕಠಿಣ ಜೈಲು ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಹೆಚ್ಚುವರಿಯಾಗಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ಪ್ರಕರಣವು ವಿದೇಶಿ ಗಣ್ಯರು ನೀಡಿದ ದುಬಾರಿ ಉಡುಗೊರೆಗಳನ್ನು ಸರ್ಕಾರಕ್ಕೆ ಸಲ್ಲಿಸದೇ, ಖಾಸಗಿ ಲಾಭಕ್ಕಾಗಿ ಬಳಸಿಕೊಂಡ ಆರೋಪಕ್ಕೆ ಸಂಬಂಧಿಸಿದೆ. ಕ್ಯಾಬಿನೆಟ್ ವಿಭಾಗದ ಅಧೀನದಲ್ಲಿರುವ ತೋಷಖಾನಾದಿಂದ ಬೆಲೆಬಾಳುವ ವಾಚ್‌ಗಳು ಹಾಗೂ ಆಭರಣಗಳನ್ನು ಇಮ್ರಾನ್ ಖಾನ್ ಉಳಿಸಿಕೊಂಡು ಮಾರಾಟ ಮಾಡಿದ್ದರು ಹಾಗೂ ಉಡುಗೊರೆಗಳ ವಿವರಗಳನ್ನು ಉದ್ದೇಶಪೂರ್ವಕವಾಗಿ ಮರೆಮಾಚಲಾಗಿದೆ ಎಂದು ಚುನಾವಣಾ ಆಯೋಗ ಸಲ್ಲಿಸಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿತ್ತು.

2021ರಲ್ಲಿ ಸೌದಿ ಅರೇಬಿಯಾ ಭೇಟಿ ವೇಳೆ ದೊರೆತ ಬುಲ್ಗಾರಿ ಆಭರಣಗಳ ಮೌಲ್ಯವನ್ನು ಕಡಿಮೆ ತೋರಿಸಿ ಸರ್ಕಾರಕ್ಕೆ ನಷ್ಟ ಉಂಟುಮಾಡಲಾಗಿದೆ ಎಂಬ ಆರೋಪವೂ ಇದೆ. ಇಮ್ರಾನ್ ಖಾನ್ ವಿರುದ್ಧ ಈಗಾಗಲೇ ಸೈಫರ್ ಸೇರಿದಂತೆ ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆಗಳು ವಿಧಿಸಲಾಗಿದ್ದು, ಈ ತೀರ್ಪು ಅವರ ರಾಜಕೀಯ ಭವಿಷ್ಯಕ್ಕೆ ಮತ್ತೊಂದು ದೊಡ್ಡ ಹೊಡೆತವಾಗಿ ಪರಿಣಮಿಸಿದೆ.

error: Content is protected !!