Monday, January 26, 2026
Monday, January 26, 2026
spot_img

ಮಲ್ಪೆ ಬೀಚ್​ನಲ್ಲಿ ಮಗುಚಿ ಬಿದ್ದ ಟೂರಿಸ್ಟ್ ಬೋಟ್, ಇಬ್ಬರ ದುರ್ಮ*ರಣ

ಹೊಸದಿಗಂತ ವರದಿ ಮಂಗಳೂರು:

ಉಡುಪಿ ಜಿಲ್ಲೆಯ ಕೋಡಿಬೆಂಗ್ರೆ ಸಮೀಪದ ಅರಬ್ಬಿ ಸಮುದ್ರದಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಟೂರಿಸ್ಟ್ ಬೋಟ್ ಮಗುಚಿ ಬಿದ್ದಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಈ ಅಪಘಾತದಲ್ಲಿ ಹಲವರು ಅಸ್ವಸ್ಥಗೊಂಡಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮೈಸೂರಿನ ಸರಸ್ವತಿಪುರಂನಿಂದ ಪ್ರವಾಸಕ್ಕೆ ಆಗಮಿಸಿದ್ದ ಬಿಪಿಒ ಕಾಲ್ ಸೆಂಟರ್ ಉದ್ಯೋಗಿಗಳ 28 ಮಂದಿಯ ತಂಡವು ಎರಡು ಪ್ರವಾಸಿ ಬೋಟ್‌ಗಳಲ್ಲಿ ವಿಹಾರಕ್ಕೆ ತೆರಳಿತ್ತು. ಒಂದೊಂದು ಬೋಟ್‌ನಲ್ಲಿ 14 ಮಂದಿ ಇದ್ದು, ಕೋಡಿಬೆಂಗ್ರೆ ಅಳಿವೆ ಬಾಗಿಲಿನ ಬಳಿ ಸಮುದ್ರದ ಭಾರೀ ಅಲೆಗಳಿಗೆ ಸಿಲುಕಿದ ಒಂದು ಬೋಟ್ ಅಚಾನಕ್ಕಾಗಿ ಮಗುಚಿ ಬಿದ್ದಿದೆ.

ಅಪಘಾತದ ವೇಳೆ ಪ್ರವಾಸಿಗರು ಸಮುದ್ರದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಕ್ಷಣ ರಕ್ಷಣೆಗೆ ಧಾವಿಸಿ, ಎಲ್ಲರನ್ನು ಸುರಕ್ಷಿತವಾಗಿ ಸಮುದ್ರದಿಂದ ಹೊರತೆಗೆದಿದ್ದಾರೆ. ಈ ಅವಘಡದಲ್ಲಿ ಶಂಕರಪ್ಪ (22), ಸಿಂಧು (23), ಧರ್ಮರಾಜ್​ (26) ದಿಶಾ (26) ಇವರುಗಳ ಸ್ಥಿತಿ ಗಂಭೀರವಾಗಿತ್ತು. ಅದರಲ್ಲಿ ಶಂಕರಪ್ಪ ಮತ್ತು ಸಿಂಧು ಸಾವನ್ನಪಿದ್ದರೆ, ಉಳಿದವರ ಸ್ಥಿತಿ ಚಿಂತಾಜನಕವಾಗಿದೆ.

ನೀರಿನಲ್ಲಿ ಮುಳುಗಿದವರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಏಟಾಗಿರುವುದಾಗಿ ತಿಳಿದುಬಂದಿದೆ. ಡೆಲ್ಟಾ ಬೀಚ್ ನಿಂದ ಪ್ರವಾಸಿ ಬೋಟ್​ನಲ್ಲಿ ತೆರಳಿದ್ದ 14 ಮಂದಿಗೆ ಸಿಬ್ಬಂದಿ ಲೈಫ್ ಜಾಕೆಟ್ ನೀಡಿದ್ದರೂ, ಕೆಲ ಪ್ರವಾಸಿಗರು ಜಾಕೇಟ್ ಧರಿಸಿರಲಿಲ್ಲ ಎಂದು ತಿಳಿದಿದೆ.

ಅಪಘಾತಕ್ಕೆ ಸುರಕ್ಷತಾ ನಿಯಮಗಳ ಉಲ್ಲಂಘನೆ ಕಾರಣವಾಗಿದೆಯೇ ಎಂಬ ಕುರಿತು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಈ ಘಟನೆ ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸುಹಾನ್ ಮತ್ತು ಸೂಫಿಯಾನ ಮಾಲೀಕತ್ವದ ಟೂರಿಸ್ಟ್ ಬೋಟ್‌ಗಳು ಈ ಪ್ರವಾಸಕ್ಕೆ ಬಳಸಲಾಗಿದ್ದವು. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Must Read