ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾರಂಪರಿಕ ಔಷಗಳು ಇಂದು ವಿಶ್ವದ ದೊಡ್ಡ ಜನಸಮೂಹದ ಆರೋಗ್ಯ ರಕ್ಷಣೆಯಲ್ಲಿ ನೆರವಾಗುತ್ತಿದ್ದರೂ, ಅದಕ್ಕೆ ನ್ಯಾಯಯುತವಾದ ಮನ್ನಣೆ ಸಿಕ್ಕಿಲ್ಲ ಎಂದು ಖೇದ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಪಾರಂಪರಿಕ ಔಷಧಗಳ ಜಾಗತಿಕ ಮಹತ್ವವನ್ನು ಒತ್ತಿ ಹೇಳಿದ್ದು, ಇದರಲ್ಲಿ ಹೆಚ್ಚಿನ ವಿಶ್ವಾಸ ಹೊಂದುವಂತೆ ವಿಶ್ವಸಮುದಾಯವನ್ನು ಆಗ್ರಹಿಸಿದ್ದಾರೆ.
ಅವರು ವಿಶ್ವ ಆರೋಗ್ಯ ಸಂಸ್ಥೆಯು ಪಾರಂಪರಿಕ ಔಷಧಗಳ ಕುರಿತಂತೆ ದಿಲ್ಲಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಜಾಗತಿಕ ಶೃಂಗಸಭೆಯ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮೋದಿಯವರು ಈ ಆಗ್ರಹ ಮಾಡಿದ್ದಾರೆ. ಪಾರಂಪರಿಕ ಔಷಧಗಳ ಕುರಿತಂತೆ ವೈಜ್ಞಾನಿಕ ನೆಲೆಯಲ್ಲಿ ಜನರ ವಿಶ್ವಾಸವನ್ನು ಹೆಚ್ಚಿಸಿ ಇದನ್ನು ವಿಸ್ತರಿಸಬೇಕೆಂದು ಕರೆ ನೀಡಿದರು.
ಪಾರಂಪರಿಕ ಔಷಧಗಳಿಗೆ ಸಂಬಂಧಿಸಿ ಸಂಶೋಧನೆಯನ್ನು ಬಲಪಡಿಸಬೇಕಿದ್ದು, ಈ ನಿಟ್ಟಿನಲ್ಲಿ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಬಹುದು.ವಿಶ್ವಾಸಾರ್ಹ ನಿಯಂತ್ರಕ ಚೌಕಟ್ಟನ್ನು ಅಭಿವೃದ್ಧಿಪಡಿಸುವ ಮೂಲಕ ಪಾರಂಪರಿಕ ಔಷಧಗಳನ್ನು ಇನ್ನಷ್ಟು ಬಲಗೊಳಿಸಬಹುದಾಗಿದೆ ಎಂದ ಮೋದಿಯವರು, ಇಂದು ಪಾರಂಪರಿಕ ಔಷಧಗಳು ನಿರ್ಣಾಯಕ ತಿರುವಿನಲ್ಲಿದೆ. ಜಗತ್ತಿನ ಬಹದೊಡ್ಡ ಜನವರ್ಗ ದೀರ್ಘಕಾಲದಿಂದಲೂ ಪಾರಂಪರಿಕ ಔಷಧಗಳನ್ನು ಬಳಸುತ್ತಿದ್ದರೂ, ಇದಕ್ಕೆ ಅರ್ಹವಾದ ಮನ್ನಣೆ ಲಭಿಸಿಲ್ಲ.ನಾವು ಇಂತಹ ವಿಶ್ವಾಸ ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು.
ವ್ಯಕ್ತಿಯ ದೇಹವು ತನ್ನ ಆರೋಗ್ಯದ ಸಮತೋಲನವನ್ನು ಕಾಯ್ದುಕೊಳ್ಳುವುದು ಮುಖ್ಯ. ಇಂದು ಇಂತಹ ಸಮತೋಲನ ಕಾಯ್ದುಕೊಳ್ಳುವುದು ಕೇವಲ ಜಾಗತಿಕ ವಿಷಯವಷ್ಟೇ ಆಗಿರದೆ , ಜಾಗತಿಕ ತುರ್ತಾಗಿದೆ.ನಾವು ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಾಗಿದ್ದು, ಅತ್ಯಂತ ವೇಗದಿಂದ ಇದಕ್ಕೊಂದು ಪರಿಹಾರ ಕಲ್ಪಿಸುವ ಅಗತ್ಯವಿದೆ . ಪಾರಂಪರಿಕ ಔಷಧಗಳ ವಿಷಯ ಬಂದಾಗ ಅದರ ಸುರಕ್ಷತೆ ಮತ್ತು ಪುರಾವೆಗಳಿಗೆ ಸಂಬಂಸಿದ ಪ್ರಶ್ನೆ ಉದ್ಭವವಾಗುತ್ತದೆ ಎಂದರು.
ಅಶ್ವಗಂಧದ ಉದಾಹರಣೆಯಿತ್ತ ಮೋದಿ
ಭಾರತ ಈ ದಿಕ್ಕಿನಲ್ಲಿ ನಿರಂತರ ಕೆಲಸ ಮಾಡುತ್ತಿದೆ .ಈ ಶೃಂಗಸಭೆಯಲ್ಲಿ ನೀವೆಲ್ಲ ಅಶ್ವಗಂಧದ ಉದಾಹರಣೆಯನ್ನು ನೋಡಿದ್ದೀರಿ.ಶತಮಾನಗಳಿಂದ ಇದನ್ನು ನಮ್ಮ ಪಾರಂಪರಿಕ ಔಷಧ ವ್ಯವಸ್ಥೆಗಳಲ್ಲಿ ಬಳಸುತ್ತಾ ಬರಲಾಗಿದೆ. ಕೋವಿಡ್-೧೯ರ ಸಮಯದಲ್ಲಿ ಇದರ ಜಾಗತಿಕ ಬೇಡಿಕೆ ಹೆಚ್ಚಾಯಿತು.ಅನೇಕ ದೇಶಗಳಲ್ಲಿ ಇದರ ಬಳಕೆ ಆರಂಭವಾಯಿತು. ಭಾರತವು ತನ್ನ ಸಂಶೋಧನೆ ಮತ್ತು ಪುರಾವೆಗಳ ಆಧಾರಿತವಾದ ಮೌಲ್ಯೀಕರಣದ ಮೂಲಕ ಅಶ್ವಗಂಧವನ್ನು ಉತ್ತೇಜಿಸುತ್ತಿದೆ ಎಂದು ಪ್ರಧಾನಿಯವರು ವಿವರಿಸಿದರು.ವಿಶ್ವ ಆರೋಗ್ಯ ಸಂಸ್ಥೆಯ ಶೃಂಗಸಮ್ಮೇಳನದಲ್ಲಿ ಈ ದಿಕ್ಕಿನಲ್ಲಿ ದೃಢವಾದ ಉಪಕ್ರಮಗಳನ್ನು ಕೈಗೊಳ್ಳುವ ನೆಲೆಯಲ್ಲಿ ಜಗತ್ತು ಸಿದ್ಧಗೊಳ್ಳುತ್ತಿರುವ ಅಂಶ ಇಲ್ಲಿ ಪ್ರತಿಫಲಿತವಾಗಿರುವುದು ಸ್ವಾಗತಾರ್ಹ ಎಂದರು.
ಇದೇ ರೀತಿ ಯೋಗದ ಮಹತ್ವವನ್ನು ಒತ್ತಿ ಹೇಳಿದ ಅವರು, ಇದು ಪಾರಂಪರಿಕ ವೈದ್ಯ ವ್ಯವಸ್ಥೆಗಳ ಭಾಗವಾಗಿದೆ.ಪ್ರಾಚೀನ ಭಾರತದ ಈ ಪದ್ಧತಿಯು ಇಂದು ಇಡಿ ವಿಶ್ವಕ್ಕೆ ಆರೋಗ್ಯ, ಸಮತೋಲನ ಮತ್ತು ಸಾಮರಸ್ಯದ ಹಾದಿಯನ್ನು ತೋರಿಸಿದೆ.೧೭೫ಕ್ಕೂ ಹೆಚ್ಚು ದೇಶಗಳ ಬೆಂಬಲದೊಂದಿಗೆ ಭಾರತ ನಡೆಸಿದ ದೃಢವಾದ ಪ್ರಯತ್ನಗಳಿಂದ ವಿಶ್ವಸಂಸ್ಥೆಯು ಜೂ.೨೧ನ್ನು ಅಂತಾರಾಷ್ಟ್ರೀಯ ಯೋಗ ದಿನವೆಂದು ಘೋಷಿಸಿರುವುದನ್ನು ಉಲ್ಲೇಖಿಸಿ, ಯೋಗದ ಉತ್ತೇಜನ ಮತ್ತು ಅಭಿವೃದ್ಧಿಯಲ್ಲಿ ತೊಡಗಿರುವ ಪ್ರತಿಯೊಬ್ಬರ ಕೊಡುಗೆಯನ್ನೂ ಶ್ಲಾಘಿಸುವುದಾಗಿ ಹೇಳಿದರು.
ಕಳೆದ ೩ದಿನಗಳಲ್ಲಿ ಸಮ್ಮೇಳನದಲ್ಲಿ ಜಗತ್ತಿನೆಲ್ಲೆಡೆಯಿಂದ ಆಗಮಿಸಿದ ತಜ್ಞರು ಪಾರಂಪರಿಕ ಔಷಧಗಳ ಕುರಿತಂತೆ ಅರ್ಥಪೂರ್ಣ ಚರ್ಚೆ ನಡೆಸಿದ್ದು, ಇಂತಹ ಮಂಥನಕ್ಕೆ ಭಾರತ ಬಲವಾದ ಜಾಗತಿಕ ವೇದಿಕೆಯಾಗಿ ಮೂಡಿಬಂದಿರುವುದು ಸಂತಸದ ವಿಷಯ. ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‌ಒ)ಯೂ ಈಗ ಈ ಕಾರ್ಯಸೂಚಿಯನ್ನು ಮುಂದುವರಿಸುವಲ್ಲಿ ಮಹತ್ವದ ಪಾತ್ರ ವಹಿಸಲು ಮುಂದಾಗಿರುವುದು ಶ್ಲಾಘನೀಯ. ಡಬ್ಲ್ಯೂಎಚ್‌ಒ ಗುಜರಾತಿನ ಜಾಮ್‌ನಗರದಲ್ಲಿ ಪಾರಂಪರಿಕ ಔಷಧಗಳ ಜಾಗತಿಕ ಕೇಂದ್ರವನ್ನು ಸ್ಥಾಪಿಸಿದೆ. ವಿಶ್ವದ ಪ್ರಥಮ ಪಾರಂಪರಿಕ ಔಷಧ ಸಮ್ಮೇಳನವನ್ನು ಇಲ್ಲಿ ಆಯೋಜಿಸುವ ಮೂಲಕ ನಮ್ಮ ಮೇಲೆ ದೊಡ್ಡ ವಿಶ್ವಾಸವಿಟ್ಟು ಹೊಣೆಗಾರಿಕೆ ವಹಿಸಿದ್ದು ಇದು ಭಾರತಕ್ಕೆ ಹೆಮ್ಮೆಯ ವಿಷಯ. ಸಂಶೋಧನೆ, ಗುಣಮಟ್ಟ, ಪ್ರಾಮಾಣೀಕೃತ ಮತ್ತು ಜಾಗತಿಕ ಸಹಯೋಗದ ಮೂಲಕ ಪಾರಂಪರಿಕ ಔಷಧ ಮತ್ತು ಭಾರತೀಯ ಜ್ಞಾನ ವ್ಯವಸ್ಥೆಯನ್ನು ಮುಖ್ಯವಾಹಿನಿಯಲ್ಲಿ ತರುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
ಮೈ ಆಯುಷ್, ಆಯುಷ್ ಮಾರ್ಕ್
ಈ ಸಂದರ್ಭ ಮೋದಿಯವರು , ಆಯುಷ್ ಕ್ಷೇತ್ರಕ್ಕಾಗಿ ಇರುವ ಒಂದು ಮಾಸ್ಟರ್ ಡಿಜಿಟಲ್ ಪೋರ್ಟಲ್ ‘ಮೈ ಆಯುಷ್ ಇಂಟೆಗ್ರೇಟೆಡ್ ಸರ್ವೀಸಸ್ ಪೋರ್ಟಲ್(ಎಂಎಐಎಸ್‌ಪಿ)’ನ್ನು ಅವರು ಅನಾವರಣಗೊಳಿಸಿದರು.ಹಾಗೆಯೇ ಆಯುಷ್ ಉತ್ಪನ್ನಗಳು ಮತ್ತು ಸೇವೆಗಳ ಗುಣಮಟ್ಟಕ್ಕೆ ಸಂಬಂಸಿದ ಜಾಗತಿಕ ಮಾಪನವಾಗಿ ‘ಆಯುಷ್ ಮಾರ್ಕ್’ನ್ನೂ ಅವರು ಬಿಡುಗಡೆಗೊಳಿಸಿದರು.ಯೋಗದಲ್ಲಿ ತರಬೇತಿ ಕುರಿತ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ವರದಿ ಮತ್ತು ಫ್ರಂ ರೂಟ್ಸ್ ಟು ಗ್ಲೋಬಲ್ ರೀಚ್:೧೧ಈಯರ್ಸ್ ಆಫ್ ಟ್ರಾನ್ಸ್‌ಫಾರ್ಮೇಷನ್ ಇನ್ ಆಯುಷ್’ ಕುರಿತ ಪುಸ್ತಕ, ಭಾರತೀಯ ಪಾರಂಪರಿಕ ಔಷಧ ಪರಂಪರೆಯ ಜಾಗತಿಕ ಅನುರಣನದ ಸಂಕೇತವಾಗಿ ಆಶ್ವಗಂಧ ಕುರಿತಂತೆ ವಿಶೇಷ ಅಂಚೆ ಸ್ಟ್ಯಾಂಪ್‌ನ್ನು ಪ್ರಧಾನಿಯವರು ಬಿಡುಗಡೆಗೊಳಿಸಿದರು.ದಿಲ್ಲಿಯಲ್ಲಿ ಡಬ್ಲ್ಯೂಎಚ್‌ಒ-ಆಗ್ನೇಯ ಏಶ್ಯಾ ಪ್ರಾದೇಶಿಕ ಕಚೇರಿ ಸಂಕೀರ್ಣವನ್ನೂ ಉದ್ಘಾಟಿಸಿದರು.ಇದು ಡಬ್ಲ್ಯೂಎಚ್‌ಒದ ಭಾರತೀಯ ದೇಶೀಯ ಕಚೇರಿಯಾಗಿಯೂ ಕಾರ್ಯನಿರ್ವಹಿಸಲಿದ್ದು, ಇದು ಡಬ್ಲ್ಯೂಎಚ್‌ಒದೊಂದಿಗಿನ ಭಾರತದ ಪಾಲುದಾರಿಕೆಯಲ್ಲಿ ಮಹತ್ವದ ಮೈಲುಗಲ್ಲೆನಿಸಿದೆ.ಯೋಗ ಅಭಿವೃದ್ಧಿ ಮತ್ತು ಪ್ರಸಾರದಲ್ಲಿ ಅಸಾಧಾರಣ ಕೊಡುಗೆ ನೀಡಿದ (೧೯೨೧-೨೫)ಸಾಧಕರಿಗೆ ಪ್ರಧಾನಮಂತ್ರಿ ಪ್ರಶಸ್ತಿಗಳನ್ನು ಪಡೆದವರನ್ನು ಮೋದಿ ಗೌರವಿಸಿದರು.
ವಿಶ್ವ ಆರೋಗ್ಯ ಸಂಸ್ಥೆ ಮತ್ತು ಆಯುಷ್ ಸಚಿವಾಲಯಗಳು ಜಂಟಿಯಾಗಿ ಡಿ.೧೭ರಿಂದ ೧೯ರವರೆಗೆ ಆಯೋಜಿಸಿದ “ಸಮತೋಲನ ಪುನಸ್ಥಾಪನೆ :ಆರೋಗ್ಯ ಮತ್ತು ಯೋಗಕ್ಷೇಮದ ವಿಜ್ಞಾನ ಮತ್ತು ಅಭ್ಯಾಸ “ಹೆಸರಿನಡಿ ಸಮ್ಮೇಳನ ನಡೆದಿದೆ . ಈ ಸಮ್ಮೇಳನದಲ್ಲಿ ಜಾಗತಿಕ ನಾಯಕರು, ನೀತಿ ನಿರೂಪಕರು, ವಿಜ್ಞಾನಿಗಳು, ವೈದ್ಯಕೀಯ ತಜ್ಞರು, ದೇಶೀಯ ವಿದ್ವಾಂಸರು ಇದರಲ್ಲಿ ಪಾಲ್ಗೊಂಡಿದ್ದರು.

