Saturday, November 1, 2025

ಸಂಚಾರ ಸುಗಮ, ಆದರೆ ಸುರಕ್ಷತೆ ಮಂಗಮಾಯ: ಕಳ್ಳರ ಹಾಟ್ ಸ್ಪಾಟ್ ಆದ ಹೈವೇ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಗಮ ಸಂಚಾರದ ಕನಸಿನೊಂದಿಗೆ ನಿರ್ಮಿಸಲಾದ 8,479 ಕೋಟಿ ವೆಚ್ಚದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಇದೀಗ ಹೊಸ ಆತಂಕಕ್ಕೆ ಕಾರಣವಾಗಿದೆ. 118 ಕಿ.ಮೀ. ಉದ್ದದ, 6-ಪಥದ ಈ ಮಹತ್ವಾಕಾಂಕ್ಷೆಯ ಹೆದ್ದಾರಿಯು ಉದ್ಘಾಟನೆಯಾದಾಗಿನಿಂದಲೂ ನಿರಂತರ ಅಪಘಾತಗಳಿಂದ ಸುದ್ದಿಯಲ್ಲಿದೆ. ಆದರೆ, ಈಗ ಈ ವೇಗ ಮಾರ್ಗವು ಅಪರಾಧಗಳ ತಾಣವಾಗಿ ಮಾರ್ಪಟ್ಟಿದೆ.

ಎರಡೂವರೆ ವರ್ಷಗಳ ಹಿಂದೆ ಪ್ರಧಾನಿ ಮೋದಿ ಅವರಿಂದ ಮಂಡ್ಯದ ಹನಕೆರೆ ಬಳಿ ಉದ್ಘಾಟನೆಗೊಂಡ ಕರ್ನಾಟಕದ ಈ ಮೊದಲ ಎಕ್ಸ್‌ಪ್ರೆಸ್‌ ಹೈವೇ, ಇದೀಗ ಕಳ್ಳರು ಮತ್ತು ದರೋಡೆಕೋರರ ‘ಹಾಟ್ ಸ್ಪಾಟ್’ ಎನಿಸಿಕೊಂಡಿದೆ. ವಿಶೇಷವಾಗಿ ಸರ್ವೀಸ್ ರಸ್ತೆಗಳಲ್ಲಿ ಕಳ್ಳತನ ಮತ್ತು ದರೋಡೆ ಪ್ರಕರಣಗಳು ಮೇಲಿಂದ ಮೇಲೆ ವರದಿಯಾಗುತ್ತಿವೆ.

ಪ್ರಯಾಣಿಕರೇ ಕಳ್ಳರ ಟಾರ್ಗೆಟ್:

ರಾತ್ರಿ ವೇಳೆಯಲ್ಲಿ ಬೈಕ್‌ನಲ್ಲಿ ಬರುವ ಕಳ್ಳರು, ಹೆದ್ದಾರಿ ಪಕ್ಕದಲ್ಲಿ ವಾಹನ ನಿಲ್ಲಿಸಿ ವಿಶ್ರಮಿಸುವವರನ್ನು ಅಥವಾ ನಿದ್ರಿಸುವವರನ್ನು ಗುರಿಯಾಗಿಸಿಕೊಂಡು ಸುಲಿಗೆ ಮತ್ತು ಕಳ್ಳತನ ಮಾಡುತ್ತಿದ್ದಾರೆ. ಇತ್ತೀಚೆಗೆ ತಮಿಳುನಾಡು ಪೊಲೀಸರನ್ನೇ ಕಳ್ಳರು ದೋಚಿದ್ದಾರೆ ಎಂಬ ಸ್ಥಳೀಯರ ಆರೋಪವು ಪರಿಸ್ಥಿತಿಯ ಗಂಭೀರತೆಯನ್ನು ತಿಳಿಸುತ್ತದೆ.

ಅಸುರಕ್ಷಿತ ಹೈವೇ, ಅರ್ಧಕ್ಕೆ ನಿಂತ ಕಾಮಗಾರಿ:

ಸರ್ವೀಸ್ ರಸ್ತೆಯ ಅವ್ಯವಸ್ಥೆ: ರಸ್ತೆ ಉದ್ಘಾಟನೆಗೊಂಡು ವರ್ಷಗಳೇ ಕಳೆದರೂ, ಪ್ರಮುಖ ಸರ್ವೀಸ್ ರಸ್ತೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ನಡೆದ ಕಾಮಗಾರಿಯೂ ಅವೈಜ್ಞಾನಿಕವಾಗಿದೆ.

ಸುರಕ್ಷತಾ ಕೊರತೆ: ಪ್ರಯಾಣಿಕರ ಸುರಕ್ಷತೆಗಾಗಿ ಅಳವಡಿಸಬೇಕಿದ್ದ ಸಿಸಿ ಕ್ಯಾಮೆರಾಗಳ ಕೊರತೆ ಎದ್ದು ಕಾಣುತ್ತಿದೆ.

ಕತ್ತಲ ದಾರಿ: ಹೆದ್ದಾರಿಯ ಹಲವು ಕಡೆಗಳಲ್ಲಿ ಬೀದಿ ದೀಪಗಳು ಇಲ್ಲ.

ಪೊಲೀಸ್ ಗಸ್ತು ಇಲ್ಲ: ರಾತ್ರಿ ವೇಳೆ ಪೊಲೀಸರ ಗಸ್ತು ಕೂಡ ಇಲ್ಲದೇ ಇರುವುದು ಕಳ್ಳರಿಗೆ ವರದಾನವಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುರಕ್ಷತಾ ಕ್ರಮಗಳ ಕೊರತೆಯನ್ನೇ ಬಂಡವಾಳ ಮಾಡಿಕೊಂಡಿರುವ ಅಪರಾಧಿಗಳಿಂದಾಗಿ, ಈ ಮಹಾಮಾರ್ಗದಲ್ಲಿ ಪ್ರಯಾಣಿಸುವುದು ವಾಹನ ಸವಾರರಿಗೆ ಆತಂಕದ ವಿಷಯವಾಗಿದೆ.

error: Content is protected !!