ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಮಾಚಲ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಹಿಮಪಾತವು ಸಾಮಾನ್ಯ ಜನಜೀವನಕ್ಕೆ ತೀವ್ರ ಅಡಚಣೆ ತಂದಿದೆ. ಪ್ರವಾಸಿ ಆಕರ್ಷಣೆಯಾಗಿ ಹಿಮಪಾತ ಕಂಡು ಖುಷಿಪಡುವವರು ಒಂದೆಡೆ ಇದ್ದರೆ, ಅದೇ ಹಿಮವು ಇನ್ನೊಂದೆಡೆ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಮನಾಲಿ, ಶಿಮ್ಲಾ ಹಾಗೂ ಸುತ್ತಮುತ್ತಲಿನ ಪ್ರವಾಸಿ ಪ್ರದೇಶಗಳಲ್ಲಿ ಭಾರೀ ಹಿಮಪಾತವಾಗುತ್ತಿದ್ದು, ಕುಲು ಜಿಲ್ಲೆಯ ಕೋಥಿ–ಮನಾಲಿ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ. ರಸ್ತೆ ಮೇಲೆ ಹಿಮ ಜಮೆಯಾಗಿರುವುದರಿಂದ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಹಲವರು ಗಂಟೆಗಳ ಕಾಲ ರಸ್ತೆಯಲ್ಲೇ ಕಾಯುವ ಸ್ಥಿತಿ ನಿರ್ಮಾಣವಾಗಿದೆ.
ಹಿಮಪಾತದ ಪರಿಣಾಮವಾಗಿ ರಾಜ್ಯಾದ್ಯಂತ ಸುಮಾರು 685 ರಸ್ತೆಗಳು ಸಂಚಾರಕ್ಕೆ ಅಸಾಧ್ಯವಾಗಿವೆ. ಲಹೌಲ್–ಸ್ಪತಿ, ಚಂಬಾ, ಮಂಡಿ, ಕುಲು ಸೇರಿದಂತೆ ಹಲವಾರು ಜಿಲ್ಲೆಗಳು ಭಾಗಶಃ ಸಂಪರ್ಕ ಕಡಿತಗೊಂಡಿವೆ. ಶಿಮ್ಲಾ ಜಿಲ್ಲೆಯ ನರಕಂದ, ಜುಬ್ಬಲ್, ರೋಹ್ರು, ಚೋಪಾಲ್ ಪ್ರದೇಶಗಳಲ್ಲೂ ಜನರ ಓಡಾಟಕ್ಕೆ ತೊಂದರೆ ಉಂಟಾಗಿದೆ.
ಕಳೆದ ಎರಡು ದಿನಗಳಿಂದ ಟ್ರಾಫಿಕ್ ಜಾಮ್ ಸಮಸ್ಯೆ ತೀವ್ರವಾಗಿದ್ದು, ಸಾವಿರಾರು ಪ್ರವಾಸಿಗರು ಸುರಕ್ಷಿತ ಸ್ಥಳಗಳತ್ತ ಸಾಗಲು ಪರದಾಡುತ್ತಿದ್ದಾರೆ. ಈ ನಡುವೆ ಮುಂದಿನ ಕೆಲ ಗಂಟೆಗಳಲ್ಲಿ ಮಳೆ ಹಾಗೂ ಚಂಡಮಾರುತದ ಎಚ್ಚರಿಕೆ ನೀಡಲಾಗಿದ್ದು, ಅನಗತ್ಯ ಪ್ರಯಾಣ ತಪ್ಪಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.



