ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ನ್ಯೂಜೆರ್ಸಿ ರಾಜ್ಯದಲ್ಲಿ ಆಕಾಶದಲ್ಲೇ ಎರಡು ಹೆಲಿಕಾಪ್ಟರ್‌ಗಳು ಮುಖಾಮುಖಿ ಡಿಕ್ಕಿಯಾದ ಘಟನೆ ನಡೆದಿದೆ. ಹ್ಯಾಮಂಟನ್ ಪಟ್ಟಣದ ಸಮೀಪ ನಡೆದ ಈ ಅಪಘಾತದಲ್ಲಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆ ಬೆಳಗಿನ ಹೊತ್ತಿನಲ್ಲಿ ನಡೆದಿದ್ದು, ಅಪಘಾತದ ತೀವ್ರತೆ ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಅಪಘಾತದ ನಂತರ ತಕ್ಷಣವೇ ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ವೈದ್ಯಕೀಯ ತಂಡಗಳು ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊಗಳಲ್ಲಿ ಹೆಲಿಕಾಪ್ಟರ್‌ಗಳು ನಿಯಂತ್ರಣ ತಪ್ಪಿ ನೆಲಕ್ಕೆ ಉರುಳುತ್ತಿರುವ ದೃಶ್ಯಗಳು ಕಾಣಿಸುತ್ತಿದ್ದು, ಅಪಘಾತದ ಸ್ಥಳದಲ್ಲಿ ದಟ್ಟ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿರುವುದು ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿದೆ.
ಅಧಿಕೃತ ಮಾಹಿತಿ ಪ್ರಕಾರ, ಅಪಘಾತದಲ್ಲಿ ಎನ್‌ಸ್ಟ್ರಾಮ್ 280ಸಿ ಮತ್ತು ಎನ್‌ಸ್ಟ್ರಾಮ್ ಎಫ್-28ಎ ಮಾದರಿಯ ಹಗುರ ತೂಕದ ಹೆಲಿಕಾಪ್ಟರ್‌ಗಳು ಹಾರಾಡುತ್ತಿದ್ದವು. ಪ್ರತಿ ಹೆಲಿಕಾಪ್ಟರ್‌ನಲ್ಲಿ ಪೈಲಟ್ ಮಾತ್ರ ಇದ್ದರು ಎನ್ನಲಾಗಿದೆ. ಒಂದು ಹೆಲಿಕಾಪ್ಟರ್ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದರೆ, ಇನ್ನೊಂದು ಹೆಲಿಕಾಪ್ಟರ್‌ನ ಕಾಕ್‌ಪಿಟ್ ಗಂಭೀರವಾಗಿ ನಜ್ಜುಗುಜ್ಜಾಗಿದೆ.
ಗಾಯಗೊಂಡ ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತಕ್ಕೆ ಕಾರಣ ಏನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

