ಹೊಸದಿಗಂತ ಕಲಬುರಗಿ:
ಜಿಲ್ಲೆಯಾದ್ಯಂತ ಶರಣಬಸವೇಶ್ವರರ ಜಾತ್ರಾ ಮಹೋತ್ಸವದ ಸಂಭ್ರಮ ಮನೆ ಮಾಡಿರುವ ಬೆನ್ನಲ್ಲೇ, ತಾಲೂಕಿನ ಹಾಗರಗುಂಡಗಿ ಗ್ರಾಮದಲ್ಲಿ ಮಂಗಳವಾರ ಸಂಜೆ ಅತ್ಯಂತ ಕರುಣಾಜನಕ ಘಟನೆಯೊಂದು ಸಂಭವಿಸಿದೆ. ಗ್ರಾಮದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವರ ರಥೋತ್ಸವದ ವೇಳೆ ಭಕ್ತನೊಬ್ಬ ರಥದ ಚಕ್ರದಡಿ ಸಿಲುಕಿ ಮೃತಪಟ್ಟಿದ್ದಾನೆ.
ಮಂಗಳವಾರ ಸಂಜೆ ಗ್ರಾಮದಲ್ಲಿ ಭಕ್ತಿ-ಭಾವದಿಂದ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ನೂರಾರು ಭಕ್ತರು ‘ಶರಣು ಶರಣಾರ್ಥಿ’ ಘೋಷಣೆಗಳೊಂದಿಗೆ ತೇರನ್ನು ಎಳೆಯುತ್ತಿದ್ದರು. ಈ ಸಂದರ್ಭದಲ್ಲಿ ರಥದ ಹಗ್ಗ ಹಿಡಿದು ಎಳೆಯುತ್ತಿದ್ದ ಗ್ರಾಮದ ನಿವಾಸಿ ವಿನೋದ್ ರೆಡ್ಡಿ (40) ಅವರು ಹಠಾತ್ತನೆ ಆಯತಪ್ಪಿ ಕೆಳಗೆ ಬಿದ್ದಿದ್ದಾರೆ.
ದುರದೃಷ್ಟವಶಾತ್, ಚಲಿಸುತ್ತಿದ್ದ ರಥದ ಬೃಹತ್ ಚಕ್ರವು ವಿನೋದ್ ಅವರ ತೊಡೆಯ ಮೇಲೆಯೇ ಹರಿದಿದೆ. ಚಕ್ರ ಹರಿದ ರಭಸಕ್ಕೆ ತೀವ್ರ ರಕ್ತಸ್ರಾವ ಉಂಟಾಗಿದ್ದು, ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಣ್ಣೆದುರೇ ನಡೆದ ಈ ಭೀಕರ ದೃಶ್ಯವನ್ನು ಕಂಡು ನೆರೆದಿದ್ದ ಭಕ್ತರು ಮತ್ತು ಗ್ರಾಮಸ್ಥರು ದಿಗ್ಭ್ರಮೆಗೊಂಡಿದ್ದಾರೆ. ಸಂಭ್ರಮದ ವಾತಾವರಣವಿದ್ದ ಗ್ರಾಮದಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ ಫರಹತ್ತಬಾದ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆಯನ್ನು ಮುಂದುವರಿಸಿದ್ದಾರೆ. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.



