Thursday, November 6, 2025

ಉತ್ತರ ಪ್ರದೇಶದಲ್ಲಿ ರೈಲು ಡಿಕ್ಕಿ: ಮೃತರ ಸಂಖ್ಯೆ 6ಕ್ಕೇರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಿರ್ಜಾಪುರದ ಚುನಾರ್ ರೈಲ್ವೆ ನಿಲ್ದಾಣದಲ್ಲಿ ಕಲ್ಕಾ ಮೇಲ್ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ಮೃತಪಟ್ಟ ಭಕ್ತರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ಬೆಳಗ್ಗೆ 9:30 ರ ಸುಮಾರಿಗೆ ಪ್ಲಾಟ್‌ಫಾರ್ಮ್ ಸಂಖ್ಯೆ 3 ರಲ್ಲಿ ವೇಗವಾಗಿ ಬಂದ ರೈಲು 7–8 ಯಾತ್ರಿಕರನ್ನು ಡಿಕ್ಕಿ ಹೊಡೆದಿದೆ. 6 ಜನರು ಸಾವನ್ನಪ್ಪಿದ್ದಾರೆ. ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ನಿಖರವಾದ ಸಾವಿನ ಸಂಖ್ಯೆಯನ್ನು ರೈಲ್ವೆ ಅಧಿಕಾರಿಗಳು ಇನ್ನೂ ದೃಢಪಡಿಸಿಲ್ಲ.

ಚೋಪನ್‌ನಿಂದ ಬಂದ ಪ್ಯಾಸೆಂಜರ್ ರೈಲಿನ ಮೂಲಕ ಭಕ್ತರು ಆಗಮಿಸಿದ್ದರು. ರೈಲು ಪ್ಲಾಟ್‌ಫಾರ್ಮ್ ಸಂಖ್ಯೆ 4 ರಲ್ಲಿ ನಿಂತಿತ್ತು. ಅವರು ಪ್ಲಾಟ್‌ಫಾರ್ಮ್ ಸಂಖ್ಯೆ 3 ಅನ್ನು ತಲುಪಲು ಹಳಿಗಳನ್ನು ದಾಟಲು ಮುಂದಾಗಿದ್ದರು. ಚುನಾರ್‌ನಲ್ಲಿ ನಿಗದಿತ ನಿಲುಗಡೆ ಇಲ್ಲದೆ ವೇಗವಾಗಿ ಬಂದ ಕಲ್ಕಾ ಎಕ್ಸ್‌ಪ್ರೆಸ್ ಯಾತ್ರಿಕರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಲವರ ದೇಹಗಳು ಛಿದ್ರಗೊಂಡಿವೆ.

ಭಕ್ತರು ಕಾರ್ತಿಕ ಪೂರ್ಣಿಮೆ ಪವಿತ್ರ ಸ್ನಾನ ಮತ್ತು ಆಚರಣೆಗಳಿಗಾಗಿ ವಾರಣಾಸಿಗೆ ತೆರಳುತ್ತಿದ್ದರು. ರೈಲ್ವೆ ಅಧಿಕಾರಿಗಳು ಸ್ಥಳೀಯ ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದರು. ಗಾಯಾಳುಗಳನ್ನು ತಕ್ಷಣ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು.

error: Content is protected !!