ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಲೋಕಸೇವಾ ಆಯೋಗ ವಿವಿಧ ಹುದ್ದೆಗಳ ನೇಮಕಾತಿಗಾಗಿ ನಡೆಸುವ ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಬೇಕೆಂದು ವಿಧಾನಸಭೆಯಲ್ಲಿಂದು ಪಕ್ಷಾತೀತವಾದ ಆಗ್ರಹ ಕೇಳಿ ಬಂತು.
ಭೋಜನ ವಿರಾಮದ ಬಳಿಕ ಸಬಾಧ್ಯಕ್ಷ ಯು.ಟಿ. ಖಾದರ್ ನಿಯಮ 69 ರಡಿ ಸಾರ್ವಜನಿಕ ಮಹತ್ವದ ವಿಷಯದ ಚರ್ಚೆಗೆ ಅವಕಾಶ ಮಾಡಿಕೊಟ್ಟರು.
ಬಿಜೆಪಿಯ ಸುನೀಲ್ ಕುಮಾರ್, ಇತ್ತೀಚೆಗೆ ನಡೆದ ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಯಲ್ಲಿ ಅವ್ಯವಹಾರಗಳಾಗಿರುವ ಆರೋಪಗಳು ಕೇಳಿಬಂದಿವೆ. ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಕೆಪಿಸಿಎಸ್ ಮೇಲಿನ ಆರೋಪಗಳು ಕಡಿಮೆಯಾಗಿಲ್ಲ. ನಾಲ್ಕು ವರ್ಷದಲ್ಲಿ ನಾಲ್ಕು ಕಾರ್ಯದರ್ಶಿಗಳನ್ನು ಬದಲಾವಣೆ ಮಾಡಲಾಗಿದೆ. ಆದರೆ, ಪರೀಕ್ಷಾ ಕಂಟ್ರೋಲರ್ ಮಾತ್ರ ಒಬ್ಬರೇ ಇದ್ದಾರೆ. ಇದು ಅನುಮಾನಕ್ಕೆ ಕಾರಣವಾಗಿದೆ. ಪರೀಕ್ಷಾ ಪ್ರಕ್ರಿಯೆಗಳು ಮತ್ತು ಅರ್ಹತಾ ಪಟ್ಟಿಯಲ್ಲಿ ಲೋಪಗಳಿರುವ ಅನುಮಾನಗಳು ಕೇಳಿಬಂದಿವೆ ಎಂದರು.
ಬಿಜೆಪಿಯ ಸುರೇಶ್ ಕುಮಾರ್, ಯುವಸಮುದಾಯಕ್ಕೆ ಉದ್ಯೋಗ ಮೂಲಭೂತ ಹಕ್ಕು. ಸರ್ಕಾರಿ ನೇಮಕಾತಿಗೆ ನಡೆಯುವ ಪರೀಕ್ಷೆಗಳಲ್ಲಿ ಸಾಕಷ್ಟು ಲೋಪಗಳು ಕೇಳಿಬಂದಿವೆ. ಯುಪಿಎಸ್ ಸಿ ಮಾದರಿಯಲ್ಲಿ ನಿಷ್ಪಕ್ಷಪಾತ ವ್ಯವಸ್ಥೆಯನ್ನು ರೂಪಿಸುವ ಅಗತ್ಯವಿದೆ. ಪ್ರತ್ಯೇಕ ಪರೀಕ್ಷಾ ಮೌಲ್ಯ ಮಾಪನ ಮಂಡಳಿಯನ್ನು ರಚಿಸಿ, ಅಲ್ಲಿಂದ ಪರೀಕ್ಷಾ ಮೌಲ್ಯಮಾಪಕರನ್ನು ಬಳಸಿಕೊಳ್ಳಬೇಕು. ಈಗ ಆಯ್ಕೆಯಾಗಿರುವ ಪಟ್ಟಿಯಲ್ಲಿ ಪ್ರಭಾವಿಗಳು ಮತ್ತು ರಾಜಕಾರಣಿಗಳ ಮಕ್ಕಳ ಹೆಸರಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ , ಕೆಪಿಎಸ್ ಸಿ ಯಲ್ಲಿ ಇರುವವರಿಗೆ ಕಾನೂನಿನ ಭಯ ಇಲ್ಲವಾಗಿದೆ. ಪರೀಕ್ಷಾ ಅಕ್ರಮಗಳಲ್ಲಿ ಭಾಗಿಯಾಗಿರುವವರಿಗೆ 10 ಕೋಟಿ ರೂಪಾಯಿ ವರೆಗೆ ದಂಡ, ಜೀವಿತಾವಧಿ ಶಿಕ್ಷೆ ಮತ್ತು ಆಸ್ತಿ ಮುಟ್ಟುಗೋಲು ಹಾಕಲು ಕಾನೂನು ರೂಪಿಸಿಲಾಗಿದೆ. ಅದರ ನಂತರವೂ ಆರೋಪಗಳು ನಿಂತಿಲ್ಲ. ಇದರ ಮೇಲೆ ಏನು ಮಾಡಲು ಸಾಧ್ಯ, ಕೆಪಿಎಸ್ ಸಿ ಅನ್ನು ಮುಚ್ಚಬೇಕು ಅಷ್ಟೇ ಎಂದು ಅಭಿಪ್ರಾಯಪಟ್ಟರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ, ಬಡವರ ಮಕ್ಕಳಿಗೂ ಸರ್ಕಾರಿ ಉದ್ಯೋಗ ಸಿಗುವಂತೆ ಕೆಪಿಎಸ್ ಸಿ ಸುಧಾರಣೆಯಾಗಬೇಕು. ಅನಗತ್ಯವಾಗಿ ಹೆಚ್ಚು ಸಂಖ್ಯೆಯ ಸದಸ್ಯರನ್ನು ನೇಮಿಸಿರುವುದರಿಂದ ಅಕ್ರಮಗಳಿಗೆ ಅವಕಾಶವಾಗಿದೆ ಎಂದು ಹೇಳಿದರು.



