March 23, 2026
Monday, March 23, 2026
spot_img

Travel | ನಗರದ ಗದ್ದಲದಾಚೆ ಒಂದು ದಿನ: ಬೆಂಗಳೂರಿನ ಈ ಸೈಡ್ ನೋಡಿದ್ದೀರಾ? ಇಲ್ಲಾಂದ್ರೆ ಈಗ್ಲೇ ಟ್ರಿಪ್ ಪ್ಲಾನ್ ಮಾಡಿ!

ಬೆಂಗಳೂರು ನಗರದ ಗದ್ದಲದಿಂದ ಸ್ವಲ್ಪ ದೂರ ಸರಿದು, ಒಂದು ದಿನದಲ್ಲಿ ಪ್ರಕೃತಿ, ಇತಿಹಾಸ ಮತ್ತು ಧಾರ್ಮಿಕ ವಾತಾವರಣವನ್ನು ಅನುಭವಿಸಲು ಬಯಸುವವರಿಗೆ ಬೆಂಗಳೂರು ಗ್ರಾಮಾಂತರ ಒಂದು ದಿನದ ಪ್ರವಾಸ ಅತ್ಯುತ್ತಮ ಆಯ್ಕೆಯಾಗಿದೆ. ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (KSTDC) ಹಾಗೂ ಪ್ರವಾಸೋದ್ಯಮ ಇಲಾಖೆ ಸಂಯುಕ್ತವಾಗಿ ಆಯೋಜಿಸಿರುವ ಈ ಪ್ರವಾಸವು ಕಡಿಮೆ ಸಮಯದಲ್ಲಿ ಹೆಚ್ಚಿನ ಅನುಭವಗಳನ್ನು ನೀಡುವ ಉದ್ದೇಶ ಹೊಂದಿದೆ. ಬೆಳಿಗ್ಗೆ 7 ಗಂಟೆಗೆ ಹೊರಟ್ರೆ, ಸಂಜೆ 6 ಗಂಟೆ ಮತ್ತೆ ಮನೆಗೆ ಬರಬಹುದು. ನಗರ ಜೀವನದ ಒತ್ತಡದಿಂದ ಬಿಡುವು ಪಡೆದು, ಶಾಂತ ಮತ್ತು ಸಂಸ್ಕೃತಿಯ ನೆಲೆಗಳನ್ನು ಕಂಡು ಮನಸ್ಸಿಗೆ ವಿಶ್ರಾಂತಿ ನೀಡುವ ಅವಕಾಶ ಇದಾಗಿದೆ.

ಈ ಪ್ರವಾಸದಲ್ಲಿ ಇತಿಹಾಸ ಪ್ರಸಿದ್ಧ ದೇವನಹಳ್ಳಿ ಕೋಟೆ, ಭಕ್ತಿಗೆ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಚಿಕ್ಕ ಮಧುರೆಯ ಶನಿ ಮಹಾತ್ಮ ಸ್ವಾಮಿ ದೇವಸ್ಥಾನ ಹಾಗೂ ಶಿವಗಂಗೆಯ ಗಂಗಾಧರೇಶ್ವರ ಸ್ವಾಮಿ ಮತ್ತು ಹೊನ್ನಾದೇವಿ ದೇವಸ್ಥಾನಗಳ ದರ್ಶನಕ್ಕೆ ಅವಕಾಶ ದೊರೆಯುತ್ತದೆ. ದೇವಸ್ಥಾನ, ಕೋಟೆ ಮತ್ತು ಪ್ರಕೃತಿಯ ಸೌಂದರ್ಯವನ್ನು ಒಂದೇ ಹಾದಿಯಲ್ಲಿ ಅನುಭವಿಸುವಂತೆ ರೂಪುಗೊಂಡಿರುವ ಈ ಪ್ರವಾಸವು ಕುಟುಂಬ, ಸ್ನೇಹಿತರು ಹಾಗೂ ಧಾರ್ಮಿಕ ಪ್ರವಾಸಾಸಕ್ತರಿಗೆ ಮರೆಯಲಾಗದ ಅನುಭವವನ್ನು ನೀಡುತ್ತದೆ.

ಬೆಳಿಗ್ಗೆ 7.00ಕ್ಕೆ ಯಶವಂತಪುರದಲ್ಲಿರುವ ಕೆಎಸ್‌ಟಿಡಿಸಿ ಕಚೇರಿಯಿಂದ ಪ್ರವಾಸ ಆರಂಭವಾಗುತ್ತದೆ. ಮೊದಲ ತಾಣವಾಗಿ ಬೆಳಿಗ್ಗೆ 8.30ರಿಂದ 9.15ರವರೆಗೆ ದೇವನಹಳ್ಳಿ ಕೋಟೆಗೆ ಭೇಟಿ ನೀಡಲಾಗುತ್ತದೆ. ಟಿಪ್ಪು ಸುಲ್ತಾನ್‌ ಜನ್ಮಸ್ಥಳವಾಗಿರುವ ಈ ಕೋಟೆ ಇತಿಹಾಸ ಪ್ರಿಯರಿಗೆ ವಿಶೇಷ ಅನುಭವ ನೀಡುತ್ತದೆ.

ಇದಾದ ನಂತರ ಬೆಳಿಗ್ಗೆ 10.00ರಿಂದ 11.00ರವರೆಗೆ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಳಿಕ ಬೆಳಿಗ್ಗೆ 11.45ರಿಂದ ಮಧ್ಯಾಹ್ನ 1.00ರವರೆಗೆ ಚಿಕ್ಕ ಮಧುರೆಯ ಶನಿ ಮಹಾತ್ಮ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲಾಗುತ್ತದೆ. ಈ ದೇವಾಲಯ ಭಕ್ತರಲ್ಲಿ ವಿಶೇಷ ನಂಬಿಕೆ ಹೊಂದಿದ್ದು, ಶಾಂತ ವಾತಾವರಣದಲ್ಲಿ ಪ್ರಾರ್ಥನೆ ಮಾಡುವ ಅವಕಾಶ ದೊರೆಯುತ್ತದೆ.

ಮಧ್ಯಾಹ್ನ 1.30ರಿಂದ 2.00ರವರೆಗೆ ಮಧ್ಯಾಹ್ನದ ಊಟಕ್ಕೆ ವಿರಾಮ ನೀಡಲಾಗುತ್ತದೆ. ಊಟದ ನಂತರ ಮಧ್ಯಾಹ್ನ 2.30ರಿಂದ ಸಂಜೆ 4.30ರವರೆಗೆ ಶಿವಗಂಗೆ ಬೆಟ್ಟ ಪ್ರದೇಶಕ್ಕೆ ತೆರಳಿ ಗಂಗಾಧರೇಶ್ವರ ಸ್ವಾಮಿ ಮತ್ತು ಹೊನ್ನಾದೇವಿ ದೇವಸ್ಥಾನಗಳಲ್ಲಿ ದರ್ಶನ ಮಾಡಲಾಗುತ್ತದೆ. ಪ್ರವಾಸ ಮುಗಿದ ನಂತರ ಸಂಜೆ 6.00ಕ್ಕೆ ಮತ್ತೆ ಯಶವಂತಪುರದ ಕೆಎಸ್‌ಟಿಡಿಸಿ ಕಚೇರಿಗೆ ತಂದು ಬಿಡಲಾಗುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !