Monday, September 8, 2025

Travel Tips | ಟ್ರಿಪ್ ಹೋಗೋವಾಗ ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸುವುದು ಹೇಗೆ?

ಅನೇಕರು ತಮ್ಮ ವೀಕೆಂಡ್ ಅನ್ನು ಕುಟುಂಬ ಸಮೇತ ಅಥವಾ ಸ್ನೇಹಿತರೊಂದಿಗೆ ಟ್ರಿಪ್ ಗೆ ಹೋಗಿ ಎಂಜಾಯ್ ಮಾಡೋಕೆ ಇಷ್ಟ ಪಡುತ್ತಾರೆ. ಆದರೆ ಸಂತೋಷದ ನಡುವೆಯೇ ಆರೋಗ್ಯವನ್ನು ಕಡೆಗಣಿಸಿದರೆ ಪ್ರಯಾಣದ ಮಧ್ಯೆ ಅಥವಾ ಕೊನೆಯ ಕ್ಷಣದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆಗಳಿವೆ. ಹೀಗಾಗಿ ಪ್ರವಾಸದ ಸಂತೋಷವನ್ನು ಹಾಳುಮಾಡದಂತೆ ಕೆಲವು ಸರಳವಾದ ಆರೋಗ್ಯ ಮುನ್ನೆಚ್ಚರಿಕೆಗಳನ್ನು ಪಾಲಿಸುವುದು ಬಹಳ ಮುಖ್ಯ.

ಕೈಗಳನ್ನು ನಿಯಮಿತವಾಗಿ ತೊಳೆಯಿರಿ

ಪ್ರಯಾಣದ ವೇಳೆ ಕೈ ತೊಳೆಯುವುದು ಅತ್ಯಂತ ಸರಳವಾದ ಹಾಗೂ ಪರಿಣಾಮಕಾರಿ ವಿಧಾನ. ಸಾರ್ವಜನಿಕ ಸ್ಥಳಗಳಲ್ಲಿ ಬಟನ್, ಹ್ಯಾಂಡಲ್ ಅಥವಾ ಬೆಂಚುಗಳನ್ನು ಮುಟ್ಟಿದ ಬಳಿಕ ಸೋಪ್ ಮತ್ತು ನೀರಿನಿಂದ ಕೈ ತೊಳೆಯಬೇಕು. ಅದು ಸಾಧ್ಯವಿಲ್ಲದಿದ್ದರೆ ಹ್ಯಾಂಡ್ ಸ್ಯಾನಿಟೈಸರ್ ಬಳಸಬೇಕು.

ಬಳಸುವ ವಸ್ತುಗಳನ್ನು ಸ್ವಚ್ಛಗೊಳಿಸಿ

ಫೋನ್, ಕೀ, ವಾಲೆಟ್, ಲಗೇಜ್‌ಗಳ ಹ್ಯಾಂಡಲ್‌ಗಳು ಮುಂತಾದ ವಸ್ತುಗಳನ್ನು ಸಮಯಕ್ಕೆ ತಕ್ಕಂತೆ ಸ್ವಚ್ಛಗೊಳಿಸುವುದು ಸೂಕ್ಷ್ಮಾಣುಗಳ ಹರಡುವಿಕೆಯನ್ನು ತಡೆಯಲು ಸಹಾಯಕ. ವಿಮಾನ ಅಥವಾ ಬಸ್‌ನಲ್ಲಿ ಪ್ರಯಾಣಿಸುವಾಗ ಟ್ರೇ ಟೇಬಲ್ ಮತ್ತು ಸೀಟು ಹತ್ತಿರದ ಭಾಗಗಳನ್ನು ಕೂಡ ಒರಸಿ ಬಳಸುವುದು ಒಳಿತು.

ಹೈಡ್ರೇಟೆಡ್ ಆಗಿರಿ

ಪ್ರಯಾಣದ ಸಮಯದಲ್ಲಿ ನೀರನ್ನು ಸಾಕಷ್ಟು ಕುಡಿಯುವುದು ದೇಹದಿಂದ ವಿಷಕಾರಿ ಅಂಶಗಳನ್ನು ಹೊರಹಾಕಿ ಶಕ್ತಿಯುತವಾಗಿರಲು ನೆರವಾಗುತ್ತದೆ. ವಿಶೇಷವಾಗಿ ಬಿಸಿಲಿನ ಹವಾಮಾನದಲ್ಲಿ ಪ್ರತಿಯೊಂದು ಗಂಟೆಗೆ ಕನಿಷ್ಠ ಒಂದು ಲೋಟ ನೀರು ಕುಡಿಯುವುದು ಉತ್ತಮ.

ನಿದ್ರೆಗೆ ಆದ್ಯತೆ ನೀಡಿ

ಶರೀರದ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸರಿಯಾದ ನಿದ್ರೆ ಅಗತ್ಯ. ಪ್ರವಾಸಕ್ಕೂ ಮುನ್ನ ನಿದ್ರೆಯ ವೇಳಾಪಟ್ಟಿಯನ್ನು ಸರಿಪಡಿಸಿಕೊಳ್ಳಿ. ಹಗಲು ನಿದ್ರೆ ತಪ್ಪಿಸಿ, ರಾತ್ರಿ ವಿಶ್ರಾಂತಿಗೆ ಆದ್ಯತೆ ನೀಡಬೇಕು. ಕಾಫಿ ಅಥವಾ ಚಹಾವನ್ನು ಮಿತವಾಗಿ ಸೇವಿಸುವುದು ಉತ್ತಮ.

ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಪ್ರಯಾಣಕ್ಕೂ ಮುನ್ನ ಸಮತೋಲಿತ ಆಹಾರ ಸೇವಿಸಿ, ವಿಟಮಿನ್ ಸಿ ಮುಂತಾದ ಪೂರಕಗಳನ್ನು ಬಳಸುವುದು ಒಳಿತು. ದೀರ್ಘಕಾಲದ ಕಾಯಿಲೆ ಹೊಂದಿರುವವರು ವೈದ್ಯರ ಸಲಹೆ ಪಡೆದು ಅಗತ್ಯ ಔಷಧಿಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಬೇಕು.

ಇದನ್ನೂ ಓದಿ