ಹೊಸ ದಿಗಂತ ಡಿಜಿಟಲ್ ಡೆಸ್ಕ್;
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಲಷ್ಕರ್-ಎ-ತೊಯ್ಬಾ (ಎಲ್ಇಟಿ)ದ ಅಂಗಸಂಘಟನೆ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಭಾಗಿಯಾಗಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಮೇಲ್ವಿಚಾರಣಾ ಸಮಿತಿ ತಿಳಿಸಿದೆ. ಈ ಮೂಲಕ ಮೊದಲ ಬಾರಿಗೆ ಯುಎನ್‌ಎಸ್‌ಸಿ ವರದಿಯಲ್ಲಿ ಟಿಆರ್ಎಫ್ ಉಗ್ರ ಸಂಘಟನೆಯನ್ನು ಉಲ್ಲೇಖಿಸಲ್ಪಟ್ಟಿದೆ.
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಐವರು ಉಗ್ರರು 26 ಮಂದಿ ಪ್ರವಾಸಿಗರನ್ನು ಭೀಕರವಾಗಿ ಹತ್ಯೆ ಮಾಡಿದ್ದರು. ಈ ದಾಳಿಯ ಹೊಣೆಯನ್ನು ಅದೇ ದಿನ ಟಿಆರ್ಎಫ್ ಹೊತ್ತುಕೊಂಡಿತ್ತು. ಇದಕ್ಕೆ ಅನುಗುಣವಾಗಿ ದಾಳಿ ಸ್ಥಳದ ಫೋಟೋಗಳನ್ನೂ ಬಿಡುಗಡೆ ಮಾಡಿತ್ತು.
ಏಪ್ರಿಲ್ 26ರಂದು ಟಿಆರ್ಎಫ್ ತನ್ನ ಹೊಣೆಗಾರಿಕೆಯಿಂದ ಜಾರಿಕೊಂಡು ನಂತರ ಯಾವುದೇ ಹೇಳಿಕೆ ಬಿಡುಗಡೆ ಮಾಡಿಲ್ಲ. ಅಲ್ಲದೇ, ಬೇರಾವುದೇ ಗುಂಪುಗಳೂ ಕೂಡಾ ಘಟನೆಯ ಹೊಣೆ ಹೊತ್ತಿಲ್ಲ ಎಂದು ಯುಎನ್ಸಿಎ ವರದಿ ಹೇಳಿದೆ.
ದಾಳಿಯಲ್ಲಿ ಎಲ್ಇಟಿ ಮತ್ತು ಟಿಆರ್ಎಫ್ ನಡುವಿನ ಸಂಬಂಧವನ್ನು ಅಲ್ಲಗೆಳೆಯಲು ಸಾಧ್ಯವಿಲ್ಲ. ಈ ಸ್ಥಳ ಭಯೋತ್ಪಾದಕರ ದೌರ್ಜನ್ಯಕ್ಕೊಳಗಾದ ಅಪಾಯದ ಸ್ಥಳವಾಗಿ ಉಳಿಯಲಿದೆ ಹಾಗೂ ಭಯೋತ್ಪಾದಕ ಗುಂಪುಗಳು ಭವಿಷ್ಯದಲ್ಲೂ ದಾಳಿ ಮಾಡುವ ಅಪಾಯವಿದೆ. ಇಂಥ ದಾಳಿಗಳು ಎಲ್ಇಟಿ ಬೆಂಬಲವಿಲ್ಲದೆ ನಡೆಯಲು ಸಾಧ್ಯವಿಲ್ಲ. ಇದು ಎಲ್ಇಟಿ ಮತ್ತು ಟಿಆರ್ಎಫ್ ನಡುವಿನ ಸಂಬಂಧವನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ವಿಶ್ವಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಎಂಟಿ ವರದಿಯಲ್ಲಿ ಟಿಆರ್ ಎಫ್ ಉಲ್ಲೇಖವು ಪಾಕಿಸ್ತಾನದ ಸುಳ್ಳು ಮತ್ತು ವಂಚನೆಯನ್ನು ಜಗತ್ತು ಹೇಗೆ ನೋಡುತ್ತದೆ ಎಂಬುದನ್ನು ತೋರಿಸುತ್ತದೆ ಎಂದು ಅನಾಮಧೇಯತೆಯ ಷರತ್ತಿನ ಮೇಲೆ ಹೇಳಿದ್ದಾರೆ. ಪಹಲ್ಗಾಮ್ ದಾಳಿಯನ್ನು ಐದು ಭಯೋತ್ಪಾದಕರು ನಡೆಸಿದ್ದಾರೆ ಎಂದು ಯುಎನ್ ಎಸ್ ಸಿ ವರದಿ ತಿಳಿಸಿದೆ.
ಯುಎನ್ ಎಸ್ ಸಿಯ 1267 ನಿರ್ಬಂಧಗಳ ಸಮಿತಿಯ ಎಲ್ಲಾ ನಿರ್ಧಾರಗಳನ್ನು ವಿಶ್ವಸಂಸ್ಥೆಯ ಉನ್ನತ ಸಂಸ್ಥೆಯ ಸದಸ್ಯರು ಒಮ್ಮತದಿಂದ ಅಂಗೀಕರಿಸಲಾಗಿರುವುದರಿಂದ ಈ ಬೆಳವಣಿಗೆ ಮಹತ್ವದ್ದಾಗಿದೆ.
ಭಾರತದ ವಿದೇಶಾಂಗ ಸಚಿವಾಲಯ ಟಿಆರ್ಎಫ್ ಮತ್ತು ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕ ಅಂಗಸಂಘಟನೆಗಳ ಕುರಿತ ವಿವರವಾದ ಮಾಹಿತಿಯನ್ನು 2023ರ ಡಿಸೆಂಬರ್ನಲ್ಲಿ ಒದಗಿಸಿದೆ. 2024ರಲ್ಲಿ ಎರಡು ಸಂದರ್ಭಗಳಲ್ಲಿ ವಿದೇಶಾಂಗ ಸಚಿವಾಲಯ ಟಿಆರ್ಎಫ್ನ ಚಟುವಟಿಕೆಗಳು ಮತ್ತು ಎಲ್ಇಟಿಯೊಂದಿಗಿನ ಅದರ ಸಂಪರ್ಕಗಳ ಕುರಿತು ವಿಶ್ವಸಂಸ್ಥೆಗೆ ಮಾಹಿತಿ ನೀಡಿತ್ತು.