Thursday, October 30, 2025

ಟ್ರೋಫಿ ವಿವಾದ ಈಗ ‘ನಾಪತ್ತೆ’ ಹಂತಕ್ಕೆ: ACC ಕಚೇರಿಯಿಂದಲೇ ಏಷ್ಯಾಕಪ್ ಕಪ್ ಕಣ್ಮರೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2025ರ ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಸೋಲಿಸಿ 9ನೇ ಬಾರಿಗೆ ಚಾಂಪಿಯನ್‌ ಆಗಿ ಹೊರಹೊಮ್ಮಿದ ಟೀಂ ಇಂಡಿಯಾ, ಇನ್ನೂ ಟ್ರೋಫಿಯನ್ನು ಕೈಗೆತ್ತಿಕೊಳ್ಳಲಿಲ್ಲ ಎಂಬುದು ಕ್ರಿಕೆಟ್ ಲೋಕದಲ್ಲಿ ಹೊಸ ವಿವಾದವಾಗಿ ಮಾರ್ಪಟ್ಟಿದೆ. ಈಗ ಈ ವಿಷಯ ಮತ್ತಷ್ಟು ಗಂಭೀರ ತಿರುವು ಪಡೆದಿದ್ದು, ಏಷ್ಯಾಕಪ್ ಟ್ರೋಫಿ ಎಸಿಸಿ ಪ್ರಧಾನ ಕಚೇರಿಯಿಂದ ಕಣ್ಮರೆಯಾಗಿದೆ ಎಂದು ವರದಿಯಾಗಿದೆ.

ಮೊದಲು ಪಿಸಿಬಿ ಮತ್ತು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಅಧ್ಯಕ್ಷ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ಟೀಂ ಇಂಡಿಯಾ ನಿರಾಕರಿಸಿತ್ತು. ಇದರಿಂದ ಮುಜುಗರಕ್ಕೊಳಗಾದ ನಖ್ವಿ, ಟ್ರೋಫಿಯನ್ನು ತನ್ನೊಂದಿಗೇ ತೆಗೆದುಕೊಂಡು ಹೋಗಿದ್ದು, ಬಳಿಕ ಅದನ್ನು ದುಬೈನಲ್ಲಿರುವ ಎಸಿಸಿ ಕಚೇರಿಯಲ್ಲಿ ಇರಿಸಲಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಆ ಟ್ರೋಫಿ ಎಸಿಸಿ ಕಚೇರಿಯಲ್ಲೇ ಇಲ್ಲ ಎಂಬುದು ಬಹಿರಂಗವಾಗಿದೆ.

ನಖ್ವಿಯ ನಿರ್ದೇಶನದ ಮೇರೆಗೆ ಟ್ರೋಫಿಯನ್ನು ಯಾವುದೇ ಅನುಮತಿ ಇಲ್ಲದೆ ಸ್ಥಳಾಂತರಿಸಬಾರದು ಎಂಬ ಷರತ್ತು ಇದ್ದರೂ, ಅದು ಈಗ ಅಬುಧಾಬಿಯಲ್ಲಿರುವ ಅಜ್ಞಾತ ಸ್ಥಳಕ್ಕೆ ಸಾಗಿಸಲಾಗಿದೆ ಎಂದು ಎಎನ್‌ಐ ವರದಿ ತಿಳಿಸಿದೆ. ಕೆಲವು ದಿನಗಳ ಹಿಂದೆ ಬಿಸಿಸಿಐ ಅಧಿಕಾರಿಯೊಬ್ಬರು ಎಸಿಸಿ ಕಚೇರಿಗೆ ಭೇಟಿ ನೀಡಿದಾಗ, ಟ್ರೋಫಿ ಇಲ್ಲದಿರುವುದು ಸ್ಪಷ್ಟವಾಗಿದೆ.

ಈ ಘಟನೆಗೆ ಬೇಸರಗೊಂಡಿರುವ ಬಿಸಿಸಿಐ, ನಖ್ವಿಯ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಐಸಿಸಿಗೆ ಅಧಿಕೃತ ದೂರು ಸಲ್ಲಿಸಲು ತಯಾರಿ ನಡೆಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಬಿಸಿಸಿಐ ನಖ್ವಿಯನ್ನು ಎಸಿಸಿ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲು ಹಾಗೂ ಐಸಿಸಿಯ ಸದಸ್ಯ ಸ್ಥಾನದಿಂದ ವಜಾಗೊಳಿಸಲು ಯೋಚಿಸುತ್ತಿದೆ.

error: Content is protected !!