ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ತಂದೆಯವರಿಗಿದ್ದ ಆಲ್ಝೈಮರ್ ಕಾಯಿಲೆಯ ಬಗ್ಗೆ ಮಾತನಾಡುತ್ತಾ, ಸ್ವತಃ ಆ ಕಾಯಿಲೆಯ ಹೆಸರನ್ನೇ ಮರೆತು ತಡಕಾಡಿದ ಸ್ವಾರಸ್ಯಕರ ಹಾಗೂ ಚರ್ಚಾಸ್ಪದ ಘಟನೆ ನಡೆದಿದೆ.
ನ್ಯೂಯಾರ್ಕ್ ಮ್ಯಾಗಜೀನ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಟ್ರಂಪ್ ತಮ್ಮ ತಂದೆ ಫ್ರೆಡ್ ಟ್ರಂಪ್ ಅವರ ಆರೋಗ್ಯದ ಬಗ್ಗೆ ಮಾತನಾಡುತ್ತಿದ್ದರು. ತಮ್ಮ ತಂದೆ ಸುಮಾರು 86-87 ವರ್ಷದವರಿದ್ದಾಗ ಒಂದು ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ನೆನಪಿಸಿಕೊಳ್ಳಲು ಯತ್ನಿಸಿದರು. ಆದರೆ, ಎಷ್ಟು ಪ್ರಯತ್ನಿಸಿದರೂ ಅವರಿಗೆ ‘ಆಲ್ಝೈಮರ್’ ಎಂಬ ಪದ ನೆನಪಿಗೆ ಬರಲಿಲ್ಲ.
ತಲೆ ಕೆಡಿಸಿಕೊಂಡ ಟ್ರಂಪ್, ಪಕ್ಕದಲ್ಲಿದ್ದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರ ಸಹಾಯ ಕೋರಿದರು. ಲೀವಿಟ್ ಅವರು ಅದು ‘ಆಲ್ಝೈಮರ್’ ಎಂದು ನೆನಪಿಸಿದಾಗ, ತಕ್ಷಣವೇ ಪ್ರತಿಕ್ರಿಯಿಸಿದ ಟ್ರಂಪ್, “ಹೌದು, ಆ ಕಾಯಿಲೆ ನನಗಂತೂ ಇಲ್ಲ. ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ” ಎಂದು ಸ್ಪಷ್ಟಪಡಿಸಿದರು.
ಸ್ಮರಣಶಕ್ತಿ ಮತ್ತು ಚಿಂತನಾ ಕೌಶಲ್ಯದ ಮೇಲೆ ಪರಿಣಾಮ ಬೀರುವ ಈ ಗಂಭೀರ ನರವೈಜ್ಞಾನಿಕ ಕಾಯಿಲೆಯ ಹೆಸರನ್ನೇ ಮರೆತದ್ದು ಈಗ ಹಲವರ ಟೀಕೆಗೆ ಗುರಿಯಾಗಿದೆ. ಕೇವಲ ಇದೊಂದೇ ಅಲ್ಲದೆ, ಇತ್ತೀಚೆಗೆ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯ ಭಾಷಣದ ವೇಳೆ ಟ್ರಂಪ್ ಗ್ರೀನ್‌ಲ್ಯಾಂಡ್ ಅನ್ನು ಐಲ್ಯಾಂಡ್ ಜೊತೆ ಸೇರಿಸಿ ಮಾತನಾಡಿದ್ದರು.
ತಮ್ಮ ತಂದೆಗೆ ಕೇವಲ ಆಲ್ಝೈಮರ್ ಇತ್ತೇ ಹೊರತು ಬೇರೆ ಯಾವುದೇ ಕಾಯಿಲೆ ಇರಲಿಲ್ಲ ಎಂದು ಹೇಳುವ ಭರದಲ್ಲಿ, ಪದ ನೆನಪಿಸಿಕೊಳ್ಳಲು ಟ್ರಂಪ್ ಹೆಣಗಾಡಿದ ಈ ವಿಡಿಯೋ ಮತ್ತು ವರದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದೆ.



