January20, 2026
Tuesday, January 20, 2026
spot_img

ರಷ್ಯಾದ ಎರಡು ಅತಿದೊಡ್ಡ ತೈಲ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದ ಟ್ರಂಪ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ರಷ್ಯಾದ ಎರಡು ಅತಿದೊಡ್ಡ ತೈಲ ಕಂಪನಿಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಬಂಧ ಹೇರಿದ್ದಾರೆ. ಬುಡಾಪೆಸ್ಟ್‌ನಲ್ಲಿ ನಡೆಯಬೇಕಿದ್ದ ಟ್ರಂಪ್-ಪುಟಿನ್ ಶೃಂಗಸಭೆ ರದ್ದಾದ ಒಂದು ದಿನದ ಬಳಿಕ ಈ ಬೆಳವಣಿಗೆಯಾಗಿದೆ.

ರಷ್ಯಾದ ಎರಡು ಅತಿದೊಡ್ಡ ತೈಲ ಕಂಪನಿಗಳಾದ ರಾಸ್ನೆಫ್ಟ್ ಮತ್ತು ಲುಕ್‌ಆಯಿಲ್‌(Lukoil) ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಹಣಕಾಸು ಸಚಿವ ಸ್ಕಾಟ್ ಬೆಸೆಂಟ್ ಹೇಳಿದ್ದಾರೆ.

ಪುಟಿನ್ ಈ ಅರ್ಥಹೀನ ಯುದ್ಧವನ್ನು ಕೊನೆಗಾಣಿಸಲು ನಿರಾಕರಿಸುತ್ತಿರುವ ಕಾರಣ, ಕ್ರೆಮ್ಲಿನ್‌ನ ಯುದ್ಧ ಯಂತ್ರಕ್ಕೆ ಹಣ ಒದಗಿಸುವ ಈ ತೈಲಕ ಕಂಪನಿಗಳ ಮೇಲೆ ನಿರ್ಬಂಧ ವಿಧಿಸಲಾಗುತ್ತಿದೆ. ಅಗತ್ಯಬಿದ್ದರೆ ಮತ್ತಷ್ಟು ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಯುದ್ಧಕ್ಕೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಅಮೆರಿಕಾ ಪ್ರಯತ್ನಿಸುತ್ತಲೇ ಇದೆ ಮತ್ತು ಶಾಶ್ವತ ಶಾಂತಿ ಸಂಪೂರ್ಣವಾಗಿ ರಷ್ಯಾದ ಪ್ರಾಮಾಣಿಕ ಮಾತುಕತೆ ಮೇಲೆ ಅವಲಂಬಿತವಾಗಿದೆ ಎಂದು ಅವರು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡೊನಾಲ್ಡ್ ಟ್ರಂಪ್, ‘ರಷ್ಯಾದ ಎರಡು ದೊಡ್ಡ ತೈಲ ಕಂಪನಿಗಳ ಮೇಲೆ ನಿರ್ಬಂಧ ಹೇರಲಾಗಿದೆ. ಇವು ಅಗಾಧ ನಿರ್ಬಂಧಗಳಾಗಿವೆ. ಇನ್ನು ಯುದ್ಧ ಇತ್ಯರ್ಥವಾಗುತ್ತದೆ ಎಂದು ನಾವು ಭಾವಿಸುತ್ತೇವೆ. ಕ್ಷಿಪಣಿಗಳು ಮತ್ತು ಇತರ ವಿಚಾರಗಳಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ, ಆದರೆ ಅದು ಅಗತ್ಯವಿಲ್ಲ ಎಂದು ತಿಳಿದಿದ್ದೇವೆ’ ಎಂದು ಹೇಳಿದ್ದಾರೆ.

‘ನಾವು ಅವರು ತಮ್ಮ ಸ್ಥಳಕ್ಕೆ ಹಿಂದಿರುಗಬೇಕು ಎಂದು ಬಯಸುತ್ತೇವೆ. ಕಳೆದ ವಾರ ರಷ್ಯಾ ಮತ್ತು ಉಕ್ರೇನ್ ಎರಡೂ ಕಡೆ ಸುಮಾರು 8,000 ಸೈನಿಕರು ಸಾವನ್ನಪ್ಪಿದ್ದಾರೆ. ಇದು ವಿಚಿತ್ರ ಪರಿಸ್ಥಿತಿ. ನಾವು ಇದನ್ನು ಅಂತ್ಯಗೊಳಿಸಲು ಬಯಸುತ್ತೇವೆ. ಈಗ ನಾಲ್ಕು ವರ್ಷಗಳಾಗಿವೆ… ನಾನು ಅಧ್ಯಕ್ಷನಾಗಿದ್ದರೆ, ಈ ಯುದ್ಧವೇ ಆಗುತ್ತಿರಲಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.

Must Read